ಕಾಬೂಲ್(ಅಫ್ಘಾನಿಸ್ತಾನ): ತಾಲಿಬಾನಿಗಳ ದಾಳಿ ನಂತರ ಅಫ್ಘಾನಿಸ್ತಾನದಲ್ಲಿ ಜನ ಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿತ್ತು. ಆಫ್ಘನ್ ದಕ್ಷಿಣ ಪ್ರಾಂತ್ಯವಾದ ಹೆಲ್ಮಂಡ್ ಕೂಡಾ ತೀವ್ರ ದುಷ್ಪರಿಣಾಮಗಳಿಗೆ ಒಳಗಾಗಿತ್ತು. ಆದರೆ ಈಗ ಅಲ್ಲಿನ ಜನಜೀವನ ತಹಬದಿಗೆ ಬರುತ್ತಿದೆ.
ಆಗಸ್ಟ್ 13ರಂದೇ ತಾಲಿಬಾನಿಗಳ ವಶವಾಗಿದ್ದ ಹೆಲ್ಮಂಡ್ ಪ್ರಾಂತ್ಯಕ್ಕೆ ಈಗ ಹೊಸ ರಾಜ್ಯಪಾಲರು ನೇಮಕವಾಗಿದ್ದಾರೆ. ತಾಲಿಬಾನ್ ಸರ್ಕಾರ ಅಬ್ದುಲ್ ಅಹದ್ ಎಂಬಾತನನ್ನು ರಾಜ್ಯಪಾಲನನ್ನಾಗಿ ನೇಮಿಸಿದೆ.
ಹಿಂದಿನ ಸರ್ಕಾರಿ ಪಡೆಗಳ ವಿರುದ್ಧ ಹೋರಾಡಿದ್ದ ಅಹದ್ ಬ್ರಿಟಿಷ್ ಮತ್ತು ಅಮೆರಿಕನ್ ಪಡೆಗಳು ಅಫ್ಘಾನಿಸ್ತಾನದಲ್ಲಿ ಇದ್ದ ವೇಳೆ ಕೆಲ ಕಾಲ ಅಡಗಿ ಕುಳಿತಿದ್ದನು. ಈಗ ತಾಲಿಬಾನ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಆತನನ್ನು ರಾಜ್ಯಪಾಲನನ್ನಾಗಿ ನೇಮಿಸಲಾಗಿದೆ.
ತಾಲಿಬಾನ್‌ಗಳು ಹೆಲ್ಮಂಡ್ ಪ್ರಾಂತ್ಯದ ಮೇಲೆ ಹಿಡಿತ ಸಾಧಿಸಿದ ದಿನದಿಂದಲೂ ಎಲ್ಲಾ ಸರ್ಕಾರಿ ಇಲಾಖೆಗಳೂ ಕಾರ್ಯ ನಿರ್ವಹಿಸುತ್ತಿವೆ. ಎಲ್ಲಾ ಎನ್ಜಿಓ, ಇಲಾಖೆಗಳೂ ಜನರಿಗೆ ಸೇವೆ ಒದಗಿಸುತ್ತಿವೆ ಎಂದು ಅಬ್ದುಲ್ ಅಹದ್ ಸ್ಪಷ್ಟನ ನೀಡಿದ್ದಾರೆ.
ಹಿಂದಿನ ಬಾರಿ ತಾಲಿಬಾನ್ ಸರ್ಕಾರ ಅಧಿಕಾರದಲ್ಲಿದ್ದಾಗ, ಮಹಿಳೆಯರಿಗೆ ಹಕ್ಕುಗಳನ್ನು ನಿರಾಕರಿಸಲಾಗಿತ್ತು. ಆದರೆ ಈಗ ಮಹಿಳೆಯರಿಗೆ ಮನೆಯಿಂದ ಹೊರಗೆ ಕೆಲಸ ಮಾಡಲು ಅವಕಾಶ ನೀಡಲಾಗುತ್ತಿದೆ ಎಂದಿದ್ದಾರೆ.
ಪ್ರಾಂತ್ಯದಲ್ಲಿ ಇಸ್ಲಾಂ ಅಥವಾ ಷರಿಯಾ ಕಾನೂನನ್ನು ಅಳವಡಿಸಿಕೊಳ್ಳಲಾಗುತ್ತದೆ. ಪ್ರಾಂತ್ಯದ ಬಾಲಕಿಯರು ಕೆಲವು ಷರತ್ತುಗಳ ಅನ್ವಯ ಶಾಲೆಗೆ ಹಾಜರಾಗಬಹುದು. ಆದರೆ ವಿದೇಶಿ ಶಿಕ್ಷಣ ನೀತಿ ಅಳವಡಿಕೊಳ್ಳಲು ಸಾಧ್ಯವಿಲ್ಲ ಎಂದು ಅಬ್ದುಲ್ ಅಹದ್ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಮುಂಬೈನಲ್ಲಿ ಓರ್ವ ಶಂಕಿತ ಭಯೋತ್ಪಾದಕನ ಬಂಧಿಸಿದ ಎಟಿಎಸ್