ಕಾಬೂಲ್ (ಅಫ್ಘಾನಿಸ್ತಾನ): ಕಾಬೂಲ್‌ನಲ್ಲಿ ಕಳೆದ 24 ಗಂಟೆಗಳಲ್ಲಿ ನಡೆದ ಮೂರು ಪ್ರತ್ಯೇಕ ಬಾಂಬ್ ಸ್ಫೋಟದ ಪ್ರಕರಣಗಳಲ್ಲಿ ಏಳು ಮಂದಿ ಬಲಿಯಾಗಿದ್ದಾರೆ.
ಕಾಬೂಲ್‌ನ ಚಹಾರ್ ಏಸ್ಯಾಬ್ ಜಿಲ್ಲೆಯಲ್ಲಿ ನಿನ್ನೆ ಬೆಳಗ್ಗೆ ವಾಹನವೊಂದು ತೆರಳುವ ವೇಳೆ ರಸ್ತೆ ಬದಿ ಇರಿಸಲಾಗಿದ್ದ ಬಾಂಬ್ ಸ್ಫೋಟಿಸಿ ಒಂದೇ ಕುಟುಂಬದ ಐವರು ಮೃತಪಟ್ಟಿದ್ದರು.
ನಿನ್ನೆ ಮಧ್ಯಾಹ್ನ ಕಾಬೂಲ್‌ನ ಬಾಗ್ರಾಮಿ ಜಿಲ್ಲೆಯಲ್ಲಿ ಸಂಭವಿಸಿದ ಮತ್ತೊಂದು ಬಾಂಬ್ ಸ್ಫೋಟದಲ್ಲಿ ಓರ್ವ ಪೊಲೀಸ್ ಸಾವನ್ನಪ್ಪಿದ್ದು, ಮತ್ತೊಬ್ಬ ಸಿಬ್ಬಂದಿ ಗಾಯಗೊಂಡಿದ್ದಾರೆ. ಕಾಬೂಲ್‌ನ ಪಾಗ್ಮಾನ್ ಜಿಲ್ಲೆಯ ಖರ್ಘಾ ಸರೋವರದ ಬಳಿ ನಡೆದ ದಾಳಿಯಲ್ಲಿ ಒಬ್ಬರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ವಿಗ್, ಸಾಕ್ಸ್, ಒಳ ಉಡುಪಿನಲ್ಲಿಟ್ಟು ಚಿನ್ನ, ಕರೆನ್ಸಿ ಸಾಗಾಟ; 11 ಜನರ ಬಂಧನ
2021ರ ಮೇ ತಿಂಗಳೊಳಗಾಗಿ ಅಫ್ಘಾನಿಸ್ತಾನದಿಂದ ಅಮೆರಿಕದ ಸೈನ್ಯ ಹಿಂತೆಗೆದುಕೊಳ್ಳಲು ಗಡುವು ನೀಡಿದ ಬೆನ್ನಲ್ಲೇ ಅಫ್ಘನ್ ಭದ್ರತಾ ಸಿಬ್ಬಂದಿ, ಸರ್ಕಾರಿ ನೌಕರರ ಮೇಲೆ ದಾಳಿ ನಡೆಸಲಾಗುತ್ತಿದೆ. ಕಳೆದ 18 ದಿನಗಳಲ್ಲಿ ವಿವಿಧ ಘಟನೆಗಳಲ್ಲಿ 144 ಜನರು ಸಾವನ್ನಪ್ಪಿದ್ದು, 214 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.