ಕಾಬೂಲ್: ಅಫ್ಘಾನಿಸ್ತಾನದ ಪೂರ್ವ ನಂಗರ್‌ಹಾರ್ ಪ್ರಾಂತ್ಯದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಪಾಕಿಸ್ತಾನದ ಲಷ್ಕರ್ - ಇ - ಇಸ್ಲಾಂ ಭಯೋತ್ಪಾದಕ ಸಂಘಟನೆ ಮುಖ್ಯಸ್ಥ ಮಂಗಲ್ ಬಾಗ್ ಸಾವಿಗೀಡಾಗಿದ್ದಾನೆ.
ಅಚಿನ್ ಜಿಲ್ಲೆಯ ಬಂದಾರಿ ಪ್ರದೇಶದಲ್ಲಿ ನಡೆದ ಸ್ಫೋಟದಲ್ಲಿ ಬಾಗ್ ಸಾವನ್ನಪ್ಪಿದ್ದಾನೆ ಎಂದು ಪಜ್ವೋಕ್ ಅಫಘಾನ್ ನ್ಯೂಸ್ ವರದಿ ಮಾಡಿದೆ. ಮಂಗಲ್ ಬಾಗ್ ಹಾಗೂ ಇಬ್ಬರು ಸಹಚರರು ನಂಗರ್ಹಾನ್ ಅಚಿನ್ ಜಿಲ್ಲೆಯ ಬಂದರ್ ದಾರಾ ಪ್ರದೇಶದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ ಎಂದು ಪ್ರಾಂತೀಯ ಗವರ್ನರ್ ಜಿಯಾಲ್ಹಾಕ್ ಅಮರ್‌ಖಿಲ್ ಟ್ವೀಟ್ ಮಾಡಿದ್ದಾರೆ.
ಈ ಹಿಂದೆ ಹಲವು ಬಾರಿ ಬಾಗ್ ಸತ್ತಿದ್ದಾನೆಂದು ವರದಿಯಾಗಿತ್ತು. ಆದರೆ ಆತ ಮತ್ತೆ ಕಾಣಿಸಿಕೊಂಡಿದ್ದ ಎಂದು ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.
ಮಂಗಲ್ ಬಾಗ್ ತೆಹ್ರಿಕ್ - ಎ - ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಜಿತೆ ಸಂಯೋಜಿತ ಲಷ್ಕರ್ - ಇ- ಇಸ್ಲಾಂನ ನಾಯಕ. ಈತನ ಸಂಘಟನೆಯು ಮಾದಕವಸ್ತು ಕಳ್ಳಸಾಗಣೆ, ಕಳ್ಳಸಾಗಣೆ, ಅಪಹರಣ, ನ್ಯಾಟೋ ಬೆಂಗಾವಲುಗಳ ಮೇಲೆ ದಾಳಿ ಮತ್ತು ಸಾರಿಗೆ ವ್ಯಾಪಾರದ ಮೇಲಿನ ತೆರಿಗೆ ವಸೂಲಿ ಮಾಡುತ್ತಿತ್ತು.