ಇಸ್ಲಾಮಾಬಾದ್: ಪಾಕಿಸ್ತಾನ ವಿದೇಶಾಂಗ ಸಚಿವ ಷಾ ಮಹಮದ್ ಖುರೇಷಿ ಅವರು ವಿದೇಶಾಂಗ ಸಚಿವರ ಕಾರ್ಯತಂತ್ರದ ಎರಡನೇ ಸುತ್ತಿನ ಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಚೀನಾಗೆ ತೆರಳಿದ್ದಾರೆ.
ಈ ಎರಡು ದಿನಗಳ ಚೀನಾ ಭೇಟಿಗೆ ಹೊರಡುವ ಮುನ್ನ ಬಿಡುಗಡೆಯಾದ ವಿಡಿಯೋ ಸಂದೇಶವೊಂದರಲ್ಲಿ " ಇದು ಮಹತ್ವದ ಭೇಟಿಯಾಗಿದ್ದು, ಪ್ರಧಾನಿ ಇಮ್ರಾನ್ ಖಾನ್ ಅವರೊಂದಿಗೆ ಚರ್ಚೆ ನಡೆಸಿದ್ದೇನೆಂದು ಷಾ ಮಹಮದ್ ಖುರೇಷಿ ಅವರು ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
“ಚೀನಾಕ್ಕೆ ಬಹಳ ಪ್ರಮುಖವಾದ ವಿಷಯ ಮಾತನಾಡಲು ಹೊರಟಿದ್ದು, ಪ್ರವಾಸದ ಬಗ್ಗೆ ಪ್ರಧಾನಿಯೊಂದಿಗೆ ಸುದೀರ್ಘವಾಗಿ ಚರ್ಚಿಸಿದ್ದೇನೆ. ಈ ನಿಯೋಗ ರಾಜಕೀಯ ಮತ್ತು ಮಿಲಿಟರಿ ನಾಯಕತ್ವದ ನಿಲುವನ್ನು ಪ್ರತಿನಿಧಿಸುತ್ತದೆ. ವಿದೇಶಾಂಗ ಸಚಿವ ವಾಂಗ್ ಯಿ ಅವರೊಂದಿಗಿನ ಈ ಭೇಟಿಯು ಎರಡೂ ದೇಶಗಳಿಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ ಎಂಬ ಭರವಸೆಯನ್ನೂ ಹೊಂದಿದ್ದೇನೆ ಎಂದು ಅವರು ಹೇಳಿದ್ದಾರೆ.
ಚೀನಾ - ಪಾಕಿಸ್ತಾನ ವಿದೇಶಾಂಗ ಸಚಿವರ ಕಾರ್ಯತಂತ್ರ ಕುರಿತ ಮೊದಲ ಸುತ್ತಿನ ಸಭೆ 2019 ಮಾರ್ಚ್ನಲ್ಲಿ ನಡೆದಿತ್ತು. ಸದ್ಯ ಖುರೇಷಿ ಅವರು ಚೀನಾಗೆ ತೆರಳಿದ್ದು, ಅಲ್ಲಿನ ಹೈನಾನ್ ಪ್ರಾಂತ್ಯಕ್ಕೆ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಕಚೇರಿ ಮೂಲಗಳು ತಿಳಿಸಿವೆ.
ಇಸ್ಲಾಮಾಬಾದ್-ಬೀಜಿಂಗ್‌ನ ಸಹಕಾರಿ ಸಹಭಾಗಿತ್ವವನ್ನು ಮತ್ತಷ್ಟು ಬಲಪಡಿಸುವಲ್ಲಿ ಈ ಭೇಟಿ ಸಹಕಾರಿಯಾಗಲಿದೆ. ಈ ವೇಳೆ ಕೋವಿಡ್ ಸೇರಿದಂತೆ ದ್ವಿಪಕ್ಷೀಯ ಸಂಬಂಧಗಳು, ಅಂತಾರಾಷ್ಟ್ರೀಯ ವಿಷಯಗಳಲ್ಲಿ ಸಹಕಾರ ಕುರಿತು ಚರ್ಚೆ ನಡೆಸಲಿದ್ದಾರೆ.