ಸಿಯೋಲ್, ದಕ್ಷಿಣ ಕೊರಿಯಾ: ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಮೇಲ್ನೋಟಕ್ಕೆ ಸ್ವಲ್ಪ ಮೃದುವಾದಂತೆ ಕಂಡು ಬರುತ್ತಿದ್ದಾರೆ. ಪ್ರಸ್ತುತ ತನ್ನ ನೆರೆ ರಾಷ್ಟ್ರ ಮತ್ತು ಸಾಂಪ್ರದಾಯಿಕ ವೈರಿ ರಾಷ್ಟ್ರ ದಕ್ಷಿಣ ಕೊರಿಯಾದೊಂದಿಗೆ ಇರುವ ಸಂಪರ್ಕವನ್ನು ಗಟ್ಟಿಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಉತ್ತರ ಕೊರಿಯಾ ಹೇಳಿದೆ.
ನಿರಂಕುಶ ನೀತಿಯಿಂದ ದಕ್ಷಿಣ ಕೊರಿಯಾವನ್ನು ಖಂಡಿಸುತ್ತಿದ್ದ ಮತ್ತು ಸದಾ ದ್ವೇಷ ಕಾರುತ್ತಿದ್ದ ಕಿಮ್ ಜಾಂಗ್ ಉನ್ ಈಗ ತಮ್ಮ ವಿದೇಶಾಂಗ ನೀತಿಯಲ್ಲಿ ಅಲ್ಪ ಸ್ವಲ್ಪ ಬದಲಾವಣೆ ಮಾಡಿಕೊಳ್ಳಲು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಇದು ನೆರೆ ರಾಷ್ಟ್ರದೊಂದಿಗೆ ಶಾಂತಿ ಸ್ಥಾಪನೆಗೆ ಯತ್ನ ಎಂಬುದಾಗಿ ಬಿಂಬಿಸುವ ಪ್ರಯತ್ನ ಮಾಡುತ್ತಿದೆ.
ನಿರ್ಬಂಧಗಳಿಂದ ಹೊರಬರಲು ಪ್ಲಾನ್..!
ಈಗಾಗಲೇ ಕೊರೊನಾದಿಂದಾಗಿ ಜಗತ್ತು ತತ್ತರಿಸಿದೆ. ಉತ್ತರ ಕೊರಿಯಾದಲ್ಲೂ ಕೂಡಾ ಅಪಾರ ಹಾನಿ ನಡೆದಿರಬಹುದಾದರೂ, ಸೂಕ್ತ ಮತ್ತು ನಿಖರ ಮಾಹಿತಿಯ ಕೊರತೆಯಿದೆ. ಉತ್ತರ ಕೊರಿಯಾದಲ್ಲೂ ಕೊರೊನಾ ಸಾಕಷ್ಟು ಹಾನಿ ಸೃಷ್ಟಿಸಿದೆ. ಆರ್ಥಿಕ ಪರಿಸ್ಥಿತಿ ಕೂಡಾ ತೀರಾ ಕೆಳಮಟ್ಟಕ್ಕೆ ಇಳಿದಿದೆ. ಇತ್ತೀಚೆಗೆ ಮಾಧ್ಯಮವೊಂದು ಅಲ್ಲಿ ಆಹಾರ ಸಮಸ್ಯೆ ಕಾಣಿಸಿಕೊಂಡ ಬಗ್ಗೆ ವರದಿ ಮಾಡಿತ್ತು.
ಇದಷ್ಟೇ ಮಾತ್ರವಲ್ಲದೇ ಕೆಲವು ವರ್ಷಗಳಿಂದ ಅಮೆರಿಕ ವಿಧಿಸಿದ ನಿರ್ಬಂಧದಿಂದಾಗಿ ಅಮೆರಿಕದ ಮಿತ್ರರಾಷ್ಟ್ರಗಳೊಡನೆ ವ್ಯಾಪಾರ - ವಹಿವಾಟುಗಳನ್ನು ನಡೆಸಲೂ ಉತ್ತರ ಕೊರಿಯಾದಿಂದ ಸಾಧ್ಯವಾಗುತ್ತಿಲ್ಲ. ಇದರಿಂದ ಕೊರೊನಾದ ಜೊತೆಗೆ ಆರ್ಥಿಕ ನಿರ್ಬಂಧವೂ ಕಿಮ್ ರಾಷ್ಟ್ರವನ್ನು ಪಾತಾಳಕ್ಕೆ ತಳ್ಳಿದೆ. ಇದೆಲ್ಲದರಿಂದ ಹೊರಬರಲು ಕಿಮ್ ಯೋಜನೆ ರೂಪಿಸಿದ್ದಾರೆ ಎನ್ನಲಾಗಿದೆ.
ಶತ್ರುವನ್ನು ಮಿತ್ರನಾಗಿಸಿ..
ಉತ್ತರ ಕೊರಿಯಾದ ಶತ್ರು ರಾಷ್ಟ್ರ ದಕ್ಷಿಣ ಕೊರಿಯಾ ತುಂಬಾ ವರ್ಷಗಳಿಂದ ದ್ವೇಷ ಸಾಧಿಸಿಕೊಂಡು ಬರುತ್ತಿವೆ. ಈಗ ನಿರ್ಬಂಧಗಳಿಂದ ತತ್ತರಿಸಿರುವ ಉತ್ತರ ಕೊರಿಯಾ ದಕ್ಷಿಣ ಕೊರಿಯಾದೊಂದಿಗೆ ಮಾತುಕತೆಗೆ ಸಿದ್ಧವಾಗಿದೆ. ಇದೇ ಕಾರಣದಿಂದಾಗಿ ಎರಡೂ ರಾಷ್ಟ್ರಗಳ ಮಧ್ಯೆ ಸಂಪರ್ಕವನ್ನು ಸದಾ ಗಟ್ಟಿಯಾಗಿಸುವಂತೆ ಹಾಟ್ ಲೈನ್ (ಎರಡು ದೇಶಗಳ ನಡುವಿನ ಸಂಪರ್ಕ ಗಟ್ಟಿಗೊಳಿಸುವ ಪ್ರಕ್ರಿಯೆ) ಪುನರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ.
ದಕ್ಷಿಣ ಕೊರಿಯಾ ಅಮೆರಿಕಕ್ಕೆ ಉತ್ತಮ ಸ್ನೇಹಿತನಾಗಿದ್ದು, ಈ ಸ್ನೇಹಿತನ ಮೂಲಕ ಅಮೆರಿಕ ಉತ್ತರ ಕೊರಿಯಾದ ಮೇಲೆ ವಿಧಿಸಿರುವ ನಿರ್ಬಂಧಗಳನ್ನು ತೆರವುಗೊಳಿಸುವಂತೆ ಒತ್ತಾಯಿಸುವುದಕ್ಕಾಗಿ ಹಾಟ್ಲೈನ್ ಪುನರ್ಸ್ಥಾಪನೆಗೆ ಒತ್ತು ನೀಡಲಾಗಿದೆ ಎನ್ನಲಾಗಿದೆ. ಇತ್ತೀಚೆಗೆ ಕೆಲವು ಷರತ್ತು ಬದ್ಧ ಮಾತುಕತೆಗಳನ್ನೂ ದಕ್ಷಿಣ ಕೊರಿಯಾದೊಂದಿಗೆ ನಡೆಸಲಾಗಿದೆ.
ಮಿಸೈಲ್ ಟೆಸ್ಟ್ ಮತ್ತು ಅಮೆರಿಕ
ಮೊದಲಿನಿಂದಲೂ ತನ್ನಲ್ಲಿರುವ ಶಸ್ತ್ರಗಳು ಜಗತ್ತಿಗೆ ತೋರಿಸಿ ಬೆದರಿಸುತ್ತ ಬಂದಿದ್ದ ಉತ್ತರ ಕೊರಿಯಾ ಕೆಲವು ದಿನಗಳ ಹಿಂದಷ್ಟೇ ಕ್ಷಿಪಣಿಯೊಂದನ್ನು ಪರೀಕ್ಷೆ ಮಾಡಿದೆ. ಇದೇ ವೇಳೆ ದಕ್ಷಿಣ ಕೊರಿಯಾವನ್ನೂ ಮಾತುಕತೆಗೆ ಆಹ್ವಾನ ಮಾಡಲಾಗಿತ್ತು.
ಕ್ಷಿಪಣಿ ಪರೀಕ್ಷೆಗೆ ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದ್ದ ಅಮೆರಿಕ, ಇನ್ನೆರಡು ರಾಷ್ಟ್ರಗಳಾದ ಇಂಗ್ಲೆಂಡ್, ಫ್ರಾನ್ಸ್ನ ಜೊತೆಗೂಡಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತುರ್ತು ಸಭೆಯನ್ನು ಗುರುವಾರ (ಇಂದು) ಕರೆದಿದ್ದು, ಉತ್ತರ ಕೊರಿಯಾದ ವಿರುದ್ಧ ಯಾವ ಕ್ರಮಗಳನ್ನು ಕೈಗೊಳ್ಳಬೇಕೆಂದು ನಿರ್ಣಯಿಸುವ ಸಾಧ್ಯತೆಯಿದೆ.
ಇದನ್ನೂ ಓದಿ: ಅಲ್ಪ - ಶ್ರೇಣಿಯ ಕ್ಷಿಪಣಿ ಪರೀಕ್ಷಿಸಿದ ಉತ್ತರ ಕೊರಿಯಾ.. ಅಮೆರಿಕ ಖಂಡನೆ