ಕಠ್ಮಂಡು(ನೇಪಾಳ): ಕಳೆದ ನಾಲ್ಕು ದಿನಗಳಲ್ಲಿ ನೆರೆಹಾವಳಿ ಮತ್ತು ಭೂಕುಸಿತಕ್ಕೆ ನೆರೆಯ ರಾಷ್ಟ್ರ ನೇಪಾಳ ನಲುಗಿದೆ.
ಹೌದು, ನೇಪಾಳದಲ್ಲಿ ಭಾರೀ ಪ್ರಮಾಣದ ಭೂಕುಸಿತ ಸಂಭವಿಸಿದ ಪರಿಣಾಮ 60 ಮಂದಿ ಸಾವನ್ನಪ್ಪಿದ್ದರೆ, 41 ಜನ ನಾಪತ್ತೆಯಾಗಿದ್ದಾರೆ. ಇಲ್ಲಿನ ಮ್ಯಾಗ್ಡಿ ಜಿಲ್ಲೆಯೊಂದರಲ್ಲೇ ಭೀಕರ ಪ್ರಕೃತಿ ವಿಕೋಪಕ್ಕೆ 27 ಮಂದಿ ಬಲಿಯಾಗಿದ್ದಾರೆ. ಈ ದೇಶದ ಹಲವು ಭಾಗಗಳಲ್ಲಿ ಭೂಕುಸಿತ ಸಂಭವಿಸಿದೆ.
ಅಪಾಯದಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಭೂಕುಸಿತದಿಂದ ಮನೆಗಳು ನೆಲಸಮವಾಗಿದ್ದು, ನಿರಾಶ್ರಿತರನ್ನು ವಿವಿಧ ಶಾಲೆ, ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.
ಮಳೆಗಾಲದಲ್ಲಿ ಗುಡ್ಡಪ್ರದೇಶಗಳಿಂದ ಕೂಡಿರುವ ನೇಪಾಳದಲ್ಲಿ ಇಂತಹ ಸಮಸ್ಯೆಗಳು ಎದುರಾಗುತ್ತವೆ. ಎಲ್ಲ ನಿರಾಶ್ರಿತರನ್ನು ಶಾಲೆಗಳು ಮತ್ತು ಸಮುದಾಯ ಭವನಗಳಿಗೆ ಸ್ಥಳಾಂತರ ಮಾಡಲಾಗಿದೆ ಎಂದು ಮ್ಯಾಗ್ಡಿ ಜಿಲ್ಲೆಯ ಮುಖ್ಯಾಧಿಕಾರಿ ಗ್ಯಾನಾಥ್ ಢಾಕಲ್ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.