ನ್ಯೂಯಾರ್ಕ್ (ಅಮೆರಿಕ): ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಮಿಲಿಟರಿ ದಂಗೆ ಅಮೆರಿಕದ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿಗೆ ಅಸಾಧಾರಣ ಬೆದರಿಕೆಯಾಗಿದೆ ಎಂದು ಯುಎಸ್ ಅಧ್ಯಕ್ಷ ಜೋ ಬೈಡನ್ ಗುರುವಾರ ಅಭಿಪ್ರಾಯ ಪಟ್ಟಿದ್ದಾರೆ.
ಈಗಾಗಲೇ ಮ್ಯಾನ್ಮಾರ್‌ನಲ್ಲಿ ಹಲವಾರು ರೀತಿಯ ನಿಬಂಧನೆಗಳನ್ನು ಅಮೆರಿಕ ಘೋಷಣೆ ಮಾಡಿದ್ದು, ಮಿನ್ ಆಂಗ್ ಹೇಲಿಂಗ್ ಅವರ ಮಿಲಿಟರಿ ಆಡಳಿತದ ವಿರುದ್ಧ ನಿಲುವು ತಳೆದಿದೆ. ಮ್ಯಾನ್ಮಾರ್ ವಿರುದ್ಧ ರಫ್ತು ನಿಯಂತ್ರಣಗಳನ್ನು ಅಮೆರಿಕ ವಿಧಿಸುತ್ತಿದ್ದು, ಅಮೆರಿಕದಲ್ಲಿರುವ ಮ್ಯಾನ್ಮಾರ್‌ನ ಸರ್ಕಾರಿ ಆಸ್ತಿಗಳನ್ನು ಸ್ಥಗಿತಗೊಳಿಸುವುದಾಗಿ ಜೋ ಬೈಡನ್ ಈ ಮೊದಲು ಹೇಳಿದ್ದರು.
ಇದನ್ನೂ ಓದಿ: ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ: ಸಿಂಘು ಗಡಿಯಲ್ಲಿ ಮತ್ತೋರ್ವ ರೈತ ಸಾವು
ಮತ್ತೊಂದೆಡೆ ಮಿಲಿಟರಿ ಆಡಳಿತದ ವಿರುದ್ಧ ಜನ ದಂಗೆ ಎದ್ದಿದ್ದು, ಫೆಬ್ರವರಿ 8ರಂದು ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಈ ವೇಳೆ ಮಹಿಳೆಯೋರ್ವಳು ಪೊಲೀಸರ ಗುಂಡಿಗೆ ಬಲಿಯಾಗಿದ್ದಳು.
ಮ್ಯಾನ್ಮಾರ್‌ನಲ್ಲಿ ನಡೆಯುತ್ತಿರುವ ಮಿಲಿಟರಿ ದಂಗೆಯ ವಿರುದ್ಧ ಪ್ರತಿಭಟನೆಗಳು ಮುಂದುವರೆದಿದ್ದು, ಮಿಲಿಟರಿ ಪಡೆಯ ಪೋಸ್ಟ್ಗಳು ಹಾಗೂ ಪ್ರೊಫೈಲ್ಗಳ ಮೇಲೆ ಫೇಸ್ಬುಕ್ ಮತ್ತು ಜಾಲತಾಣಗಳ ಮೇಲೆಯೂ ನಿರ್ಬಂಧ ಹೇರಲಾಗಿದೆ.
ಮ್ಯಾನ್ಮಾರ್‌ನ ಆಡಳಿತಾರೂಢ ಪಕ್ಷದ ಕೌನ್ಸಿಲರ್ ಆಂಗ್ ಸಾನ್ ಸೂಕಿ ಸೇರಿದಂತೆ ಹಲವು ನಾಯಕರು ಬಂಧನದಲ್ಲಿದ್ದು, ದೇಶದಲ್ಲಿ ಒಂದು ವರ್ಷಗಳ ಕಾಲ ತುರ್ತು ಪರಿಸ್ಥಿತಿ ಕೂಡ ಘೋಷಣೆ ಮಾಡಲಾಗಿದೆ.