ಲಾಹೋರ್: ಪಾಕಿಸ್ತಾನದಲ್ಲಿ ಧಾರ್ಮಿಕ ಅಸಹಿಷ್ಣುತೆಯ ಮತ್ತೊಂದು ಘಟನೆ ವರದಿಯಾಗಿದೆ. ದುಷ್ಕರ್ಮಿಗಳ ಗುಂಪೊಂದು ಪಂಜಾಬ್ ಪ್ರಾಂತ್ಯದ ಹಿಂದೂ ದೇವಾಲಯದ ಮೇಲೆ ದಾಳಿ ಮಾಡಿದ್ದು, ಅಲ್ಲಿದ್ದ ವಸ್ತುಗಳನ್ನು ಸುಟ್ಟುಹಾಕಿ ವಿಗ್ರಹಗಳನ್ನು ಹಾನಿಗೊಳಿಸಿದೆ.
ಮುಸ್ಲಿಂ ಸೆಮಿನರಿಯನ್ನು ಬಾಲಕನೊಬ್ಬ ಅಪವಿತ್ರಗೊಳಿಸಿದ್ದಾನೆ ಎಂದು ಆರೋಪಿಸಿ ಲಾಹೋರ್‌ನಿಂದ 590 ಕಿ.ಮೀ ದೂರದಲ್ಲಿರುವ ರಹೀಂ ಯಾರ್ ಖಾನ್ ಜಿಲ್ಲೆಯ ಭೋಂಗ್ ನಗರದ ಹಿಂದೂ ದೇವಾಲಯದ ಮೇಲೆ ಗುಂಪೊಂದು ದಾಳಿ ನಡೆಸಿದೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.
ಎಂಟು ವರ್ಷದ ಹಿಂದೂ ಧರ್ಮೀಯ ಬಾಲಕನೋರ್ವ ಕಳೆದ ವಾರ ಭೋಂಗ್‌ನ ಸೆಮಿನರಿ ಗ್ರಂಥಾಲಯದ ಬಳಿ ಮೂತ್ರ ವಿಸರ್ಜನೆ ಮಾಡಿದ್ದಾನೆ ಎನ್ನುವ ಆರೋಪ ಕೇಳಿಬಂದಿತ್ತು. ನಂತರ ಆ ಬಾಲಕನನ್ನು ಪೊಲೀಸರು ಬಂಧಿಸಿದ್ದರು. ಆದರೆ ಬಾಲಕ ಅಪ್ರಾಪ್ತನಾದ ಹಿನ್ನೆಲೆಯಲ್ಲಿ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ ಎನ್ನಲಾಗುತ್ತಿದೆ. ಕಳೆದ ಹಲವು ದಶಕಗಳಿಂದ ಶಾಂತಿಯುತವಾಗಿ ಈ ಭಾಗದಲ್ಲಿ ಮುಸ್ಲಿಮರು ಮತ್ತು ಹಿಂದೂಗಳು ವಾಸಿಸುತ್ತಿದ್ದಾರೆ.
ಖಂಡನೆ, ಕ್ರಮಕ್ಕೆ ಆಗ್ರಹ
ಈ ಕುರಿತು ಸರಣಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಸಂಸದ ಡಾ.ರಮೇಶ್ ಕುಮಾರ್ ವಾಂಕ್ವಾನಿ, ಈ ಘಟನೆ ಸರ್ವಧರ್ಮ ಸಾಮರಸ್ಯಕ್ಕೆ ಧಕ್ಕೆ ಉಂಟುಮಾಡಿದೆ. ಭೋಂಗ್‌ನಲ್ಲಿರುವ ಹಿಂದೂ ದೇವಾಲಯದ ಮೇಲೆ ದಾಳಿ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಪರಿಸ್ಥಿತಿ ಈಗ ಅತ್ಯಂತ ಗಂಭೀರವಾಗಿದೆ. ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ದೇಗುಲಕ್ಕೆ ರೇಂಜರ್ಸ್ ಭದ್ರತೆ
ಕಾನೂನು ಕ್ರಮ ಕೈಗೊಂಡು ಗುಂಪುಗಳನ್ನು ಚದುರಿಸುವಲ್ಲಿ ಯಶಸ್ವಿಯಾಗಿದ್ದೇವೆ. ರೇಂಜರ್‌ಗಳನ್ನು ಹಿಂದೂ ದೇವಾಲಯದ ಸುತ್ತ ನಿಯೋಜಿಸಲಾಗಿದೆ. ಈ ಪ್ರದೇಶದಲ್ಲಿ ಸುಮಾರು 100 ಹಿಂದೂ ಕುಟುಂಬಗಳು ವಾಸಿಸುತ್ತಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರನ್ನು ನಿಯೋಜಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಈವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಜಿಲ್ಲಾ ಪೊಲೀಸ್ ಅಧಿಕಾರಿ ರಹೀಂ ಯಾರ್ ಖಾನ್ ಅಸದ್ ಸರ್ಫ್ರಾಜ್ ತಿಳಿಸಿದ್ದಾರೆ.
ಕೇಂದ್ರ ಸಚಿವರಿಂದ ಆಕ್ರೋಶ
ಈ ಘಟನೆ ಕುರಿತು ಟ್ವಿಟ್ಟರ್ನಲ್ಲಿ ವಿಡಿಯೋ ಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಯನ್ನು ವಿರೋಧಿಸುವವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಂತಹ ದೃಶ್ಯಗಳನ್ನು ನೋಡಿದರೂ ಕೂಡ ಕೆಲವರ ಹೃದಯ ಕರಗುವುದಿಲ್ಲ. ಇಂತಹ ಕಠಿಣ ಸ್ಥಿತಿಯಲ್ಲಿ ಕೂಡ ಸಿಎಎ ಹಿಂಪಡೆಯಲು ಪ್ರತಿಪಾದಿಸುತ್ತಾರೆ ಎಂದು ಅಲ್ಪಸಂಖ್ಯಾತರ ರಕ್ಷಣೆಯ ಅಗತ್ಯತೆಯನ್ನು ಒತ್ತಿ ಹೇಳಿದ್ದಾರೆ.