ನೈಪಿತಾವ್ (ಮ್ಯಾನ್ಮಾರ್): ಮಿಲಿಟರಿ ಕಾರ್ಯಾಚರಣೆಯ ನಂತರ ಮ್ಯಾನ್ಮಾರ್ನಲ್ಲಿ ಭಾರಿ ಪ್ರತಿಭಟನೆ ನಡೆಯುತ್ತಿದ್ದು, ಸ್ಥಗಿತಗೊಂಡಿದ್ದ ಇಂಟರ್ನೆಟ್ ಸೇವೆಗಳನ್ನು ಮತ್ತೆ ಪುನರಾರಂಭಿಸಲಾಗಿದೆ ಎಂದು ಅಂತರ್ಜಾಲ ಸೇವೆಗಳ ವೀಕ್ಷಣಾ ಸಂಸ್ಥೆ ನೆಟ್ಬ್ಲಾಕ್ಸ್ ಸೋಮವಾರ ವರದಿ ಮಾಡಿದೆ.
ಸ್ಥಳೀಯ ಕಾಲಮಾನ ಬೆಳಗ್ಗೆ 9 ಗಂಟೆಗೆ ಅಂತರ್ಜಾಲ ಸೇವೆ ಪುನಾರಂಭವಾಗಿದೆ. ಅಂಕಿಅಂಶಗಳಲ್ಲಿ ಅಂತರ್ಜಾಲ ಬಳಕೆ ಏರುತ್ತಿರುವುದು ಗೊತ್ತಾಗುತ್ತಿದೆ. ಆದರೂ ಕೆಲವು ಬಳಕೆದಾರರಿಗೆ ಸಾಮಾಜಿಕ ಜಾಲತಾಣಗಳನ್ನು ಬಳಸಲು ನಿರ್ಬಂಧವಿದೆ ಎಂದು ಸ್ಪುಟ್ನಿಕ್ ವರದಿ ಮಾಡಿದ್ದನ್ನು ನೆಟ್ಬ್ಲಾಕ್ಸ್ ಉಲ್ಲೇಖಿಸಿದೆ.
ಇದನ್ನೂ ಓದಿ: ಸಾಫ್ಟ್‌ವೇರ್ ದೋಷದಿಂದಾಗಿ ವಾಹನಗಳನ್ನು ಹಿಂಪಡೆಯಲಿರುವ ಮರ್ಸಿಡಿಸ್!
ಶನಿವಾರ ರಾತ್ರಿ 1 ಗಂಟೆಯಿಂದ ಅಂತರ್ಜಾಲ ಸೇವೆಗಳನ್ನ ಸ್ಥಗಿತಗೊಳಿಸಲಾಗಿತ್ತು ಎಂದು ಭಾನುವಾರ ನೆಟ್ ಬ್ಲಾಕ್ಸ್ ಹೇಳಿದ್ದು, ಸರ್ಕಾರ ಈ ಬಗ್ಗೆ ಆದೇಶಿಸಿದೆ ಎಂದು ಹೇಳಿತ್ತು. ಈ ವೇಳೆ ಅಂತರ್ಜಾಲ ಬಳಕೆಯನ್ನು ಸಾಮಾನ್ಯ ಮಟ್ಟಕ್ಕಿಂತ ಶೇಕಡಾ 14 ರಷ್ಟು ಕಡಿತಗೊಳಿಸಲಾಗಿತ್ತು.
ಫೆಬ್ರವರಿ 1ರಂದು ಮ್ಯಾನ್ಮಾರ್ ಮಿಲಿಟರಿ ಅಲ್ಲಿನ ಆಂಗ್ ಸಾನ್ ಸೂಕಿ ಅವರನ್ನು ಗೃಹಬಂಧನದಲ್ಲಿಟ್ಟು, ಸರ್ಕಾರವನ್ನು ಕೈವಶ ಮಾಡಿಕೊಂಡಿತ್ತು. ಮಿಲಿಟರಿ ಸರ್ಕಾರದ ವಿರುದ್ಧ ಜನಾಕ್ರೋಶವೂ ಮನೆ ಮಾಡಿದ್ದು, ಅಂತರ್ಜಾಲ ಸೇವೆಗಳನ್ನು ಬಂದ್ ಮಾಡಲಾಗಿತ್ತು.
ಈಗ ಮತ್ತೊಮ್ಮೆ ಅಂತರ್ಜಾಲ ಸೇವೆಗಳನ್ನು ಆರಂಭಿಸಲಾಗಿದ್ದು, ಈ ಬಗ್ಗೆ ನೆಟ್ಬ್ಲಾಕ್ಸ್ ಮಾಹಿತಿ ನೀಡಿದೆ.