ಕಾಬೂಲ್: ಅಫ್ಘಾನಿಸ್ತಾನದಿಂದ ತನ್ನ ಸೇನೆಯನ್ನು ಹಿಂಪಡೆಯುವ ಪ್ರಕ್ರಿಯೆ ಆರಂಭಿಸಿದ ಬಳಿಕ ಅಮೆರಿಕ ಅಧ್ಯಕ್ಷ ಜೋ ಬೈಡನ್ ಆಡಳಿತಕ್ಕೆ ಹೊಸ ಸವಾಲು ಎದುರಾಗಿದೆ. ತಾಲಿಬಾನ್ ಅಫ್ಘಾನ್ ಅನ್ನು ಸಂಪೂರ್ಣವಾಗಿ ಆಕ್ರಮಿಸಿಕೊಂಡ ನಂತರದಲ್ಲಿ ಕಾನೂನುಬಾಹಿರವಾಗಿ ಮಾದಕ ವ್ಯಾಪಾರದ ಮೇಲೆ ಉಗ್ರ ಸಂಘಟನೆ ಹೆಚ್ಚು ಅವಲಂಬಿತವಾಗಿದೆ ಎಂದು ವಿಶ್ವಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ಉಗ್ರ ಸಂಘಟನೆ ಆರ್ಥಿಕ ನೆರವಿಗಾಗಿ ಅಫೀಮು, ಮೆಥಾಂಫೆಟಮೈನ್ ಮತ್ತು ಹಶಿಶ್ ಮಾರಾಟ ಮಾಡುತ್ತಿವೆ. ರೈತರಿಂದ ಮಾದಕ ಪದಾರ್ಥಗಳ ಬೆಳೆಗಳನ್ನು ಪಡೆಯುವ ಇವರು, ಅವುಗಳನ್ನು ವಿದೇಶಗಳಿಗೆ ಕಳ್ಳದಾರಿಗಳ ಮೂಲಕ ಲಕ್ಷಾಂತರ ಡಾಲರ್‌ಗೆ ಮಾರಾಟ ಮಾಡುವ ಬಗ್ಗೆ ವಿಶ್ವಸಂಸ್ಥೆ ವರದಿ ಮಾಡಿದೆ.
ಮಾದಕವಸ್ತುಗಳು ಮತ್ತು ಮೆಥಾಂಫೆಟಮೈನ್ ಉತ್ಪಾದನೆ, ಕಳ್ಳಸಾಗಣೆ ತಾಲಿಬಾನ್‌ಗೆ ಅತಿದೊಡ್ಡ ಹಾಗೂ ಏಕೈಕ ಆದಾಯದ ಮೂಲವಾಗಿ ಉಳಿದಿದೆ ಎಂದು ಜೂನ್‌ನಲ್ಲೇ ಯುಎನ್ ವರದಿ ಮಾಡಿತ್ತು. ಇದು ಅಫ್ಘಾನಿಸ್ತಾನವನ್ನು ಅಸ್ಥಿರಗೊಳಿಸುವುದರ ಜೊತೆಗೆ ಮತ್ತಷ್ಟು ಭ್ರಷ್ಟಾಚಾರಕ್ಕೆ ವೇದಿಕೆ ಕಲ್ಪಿಸುತ್ತದೆ ಎಂದು ಕಳವಳ ವ್ಯಕ್ತಪಡಿಸಿತ್ತು. ಜಗತ್ತಿನಾದ್ಯಂತ ಮಾದಕ ವಸ್ತುಗಳ ನಿಯಂತ್ರಿಣ ದೊಡ್ಡ ಸವಾಲಾಗಿರುವ ಬೆನ್ನಲ್ಲೇ ತಾಲಿಬಾನ್‌ನ ಈ ಮಾದಕ ವ್ಯವಹಾರ ಮತ್ತಷ್ಟು ತಲೆನೋವಾಗಿ ಪರಿಣಮಿಸಲಿದೆ.
ಇದನ್ನೂ ಓದಿ: ಆಗಸ್ಟ್ 31ರೊಳಗೆ ಅಫ್ಘಾನ್‌ನಲ್ಲಿ ರಕ್ಷಣಾ ಕಾರ್ಯ ಮುಕ್ತಾಯ; ಅಗತ್ಯಬಿದ್ದರೆ ಮಾತ್ರ ಅವಧಿ ವಿಸ್ತರಣೆ: ಬೈಡನ್
ಅಫ್ಘಾನಿಸ್ತಾನದಲ್ಲಿ ದೇಶೀಯವಾಗಿ ಮಾದಕ ವಸ್ತುಗಳ ಸಂಗ್ರಹಣೆ, ಉತ್ಪಾದನೆ ಮತ್ತು ರಫ್ತುಗಳಿಂದ ಬರುವ ಒಟ್ಟಾರೆ ಆದಾಯವು ಶತಕೋಟಿ ಡಾಲರ್‌ಗಳ ಮೌಲ್ಯದ್ದಾಗಿದೆ ಎಂದು ವಿಶ್ವಸಂಸ್ಥೆಯ ಔಷಧ ಮತ್ತು ಅಪರಾಧಗಳ ಕಚೇರಿ (ಯುಎನ್‌ಒಡಿಸಿ) ವರದಿ ಹೇಳುತ್ತದೆ.