ಇಸ್ಲಾಮಾಬಾದ್(ಪಾಕಿಸ್ತಾನ) : ಪಾಕ್‌ನ ಪಂಜಾಬ್ ಪ್ರಾಂತ್ಯದಲ್ಲಿನ ಅಲ್ಪಸಂಖ್ಯಾತರಾಗಿರುವ ಹಿಂದೂ ಸಮುದಾಯಕ್ಕೆ ಸೇರಿದ ಕುಟುಂಬವೊಂದಕ್ಕೆ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. ಮಸೀದಿಯಿಂದ ಕುಡಿಯುವ ನೀರು ತರಲು ಹೋಗಿದ್ದಕ್ಕೆ ಅಲ್ಲಿನ ಸ್ಥಳೀಯರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಪಂಜಾಬ್‌ನ ರಹೀಮಿಯಾರ್ ಖಾನ್ ನಗರದ ನಿವಾಸಿಯಾಗಿರುವ ಆಲಂ ರಾಮ್ ಭೀಲ್ ಕುಟುಂಬಕ್ಕೆ ಕಿರುಕುಳ ನೀಡಿಲಾಗಿದೆ ಎನ್ನಲಾಗಿದೆ. ಹೊಲವೊಂದರಲ್ಲಿ ಆಲಂ ರಾಮ್ ಭೀಲ್ ಹಾಗೂ ಅವರ ಪತ್ನಿ ಸೇರಿ ಇತರ ಕುಟುಂಬ ಸದಸ್ಯರು ಹಸಿ ಹತ್ತಿಯನ್ನು ತೆಗೆಯುತ್ತಿದ್ದರು. ಈ ವೇಳೆ ಕುಡಿಯುವ ನೀರಿಗಾಗಿ ಹತ್ತಿರವಿದ್ದ ಮಸೀದಿಗೆ ಹೋಗಿದ್ದಾರೆ. ಇದನ್ನು ಕಂಡ ಕೆಲವು ಸ್ಥಳೀಯ ಭೂಮಾಲೀಕರು ಅವರನ್ನು ಥಳಿಸಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.
ವರದಿಯ ಪ್ರಕಾರ, ಮುಸ್ಲಿಮರ ಆರಾಧನಾ ಸ್ಥಳದ ಪಾವಿತ್ರ್ಯತೆ ಉಲ್ಲಂಘನೆ ಮಾಡಿದ್ದಕ್ಕಾಗಿ ಈ ಹಿಂದೂ ಕುಟುಂಬವನ್ನು ಒತ್ತೆಯಾಳಾಗಿ ಇರಿಸಿಕೊಳ್ಳಲಾಗಿತ್ತು. ಹೊಲದಲ್ಲಿ ಕೆಲಸ ಮುಗಿಸಿ ಮನೆಗೆ ಹಿಂತಿರುಗಿದಾಗ ಭೂಮಾಲೀಕರು ತಮ್ಮ ಡೇರಾಗಳಲ್ಲಿ ಕುಟುಂಬ ಸದಸ್ಯರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದರು.
ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಿಲ್ಲ ಎಂದು ಆಲಂ ರಾಮ್ ಭೀಲ್ ಹೇಳಿದ್ದಾರೆ. ಪೊಲೀಸರ ಈ ನಿರ್ಲಕ್ಷ್ಯವನ್ನು ಖಂಡಿಸಿ ಆಲಂ ರಾಮ್ ಭೀಲ್ ಮತ್ತು ಜಿಲ್ಲಾ ಶಾಂತಿ ಸಮಿತಿಯ ಸದಸ್ಯರಾದ ಪೀಟರ್ ಜಾನ್ ಭೀಲ್ ಠಾಣೆ ಬಳಿ ಪ್ರತಿಭಟಿಸಿದರು. ಬಳಿಕ ಆಡಳಿತಾರೂಢ ಪಿಟಿಐ ಶಾಸಕ ಜಾವೇದ್ ವಾರಿಯಚ್ ಅವರನ್ನು ಸಂಪರ್ಕಿಸಿದ್ದಾರೆ. ಆ ಬಳಿಕ ಶುಕ್ರವಾರ ಪ್ರಕರಣ ದಾಖಲಿಸಲು ಶಾಸಕರು ಸಹಾಯ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಒಂದು ಅಂದಾಜಿನ ಪ್ರಕಾರ, 75 ಲಕ್ಷ ಹಿಂದೂಗಳು ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಾರೆ. ಆದರೆ, ಸಮುದಾಯದ ಪ್ರಕಾರ 90 ಲಕ್ಷಕ್ಕೂ ಹೆಚ್ಚು ಹಿಂದೂಗಳು ಪಾಕ್ನಲ್ಲಿ ವಾಸಿಸುತ್ತಿದ್ದಾರೆ. ಪಾಕ್‌ನ ಬಹುತೇಕ ಹಿಂದೂ ಜನಸಂಖ್ಯೆಯು ಸಿಂಧ್ ಪ್ರಾಂತ್ಯದಲ್ಲಿ ನೆಲೆಸಿದೆ.