ನ್ಯೂಯಾರ್ಕ್ : ಪಾಕಿಸ್ತಾನವು ಹಿಂದೂ ಮತ್ತು ಕ್ರಿಶ್ಚಿಯನ್ ಮಹಿಳೆಯರನ್ನು "ಉಪಪತ್ನಿಗಳು" ಮತ್ತು ಬಲವಂತದ ವಧುಗಳಾಗಿ ಚೀನಾಕ್ಕೆ ಮಾರಾಟ ಮಾಡುತ್ತಿದೆ ಎಂದು ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ರಾಜತಾಂತ್ರಿಕ ಸ್ಯಾಮ್ಯುಯೆಲ್ ಬ್ರೌನ್ಬ್ಯಾಕ್ ಆರೋಪಿಸಿದ್ದಾರೆ.
ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯ ಎಸಗಲಾಗುತ್ತಿದೆ. ಅಲ್ಪಸಂಖ್ಯಾತರಿಗೆ ಪರಿಣಾಮಕಾರಿ ಬೆಂಬಲವಿಲ್ಲದಿರುವುದು ಇದಕ್ಕೆ ಮುಖ್ಯ ಕಾರಣ ಎಂದು ಹೇಳಿದ್ದಾರೆ. ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯಡಿ ಪಾಕಿಸ್ತಾನವನ್ನು ನಿರ್ದಿಷ್ಟ ಕಾಳಜಿಯ ದೇಶವಾಗಿ (country of particular concern) ನೇಮಿಸಲು ಇದು ಒಂದು ಕಾರಣ ಎಂದು ಉಲ್ಲೇಖಿಸಿದ್ದಾರೆ.
ದಶಕಗಳಿಂದ ಚೀನಾ ಹೇರಿದ ಒನ್-ಚೈಲ್ಡ್ ನೀತಿ ಜಾರಿಯಲ್ಲಿದೆ. ಇದರಿಂದಾಗಿ ಹುಡುಗರಿಗೆ ಆದ್ಯತೆ ನೀಡುತ್ತಿರುವ ಚೀನಾ ದೇಶದಲ್ಲಿ ಮಹಿಳೆಯರ ಕೊರತೆ ಹೆಚ್ಚಾಗಿದೆ. ಚೀನಾದ ಪುರುಷರು ಇತರ ದೇಶಗಳಿಂದ ಮಹಿಳೆಯರನ್ನು ವಧು, ಪ್ರೇಯಸಿ ಮತ್ತು ಕಾರ್ಮಿಕರಾಗಿ ಆಮದು ಮಾಡಿಕೊಳ್ಳಲು ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಉಲ್ಲೇಖಿಸಿ ಭಾರತವನ್ನು ನಿರ್ದಿಷ್ಟ ಕಾಳಜಿಯ ದೇಶವಾಗಿ ಇರಿಸಲು ಶಿಫಾರಸು ಮಾಡಿದ್ದಾರೆ. ಆದರೆ, ರಾಜ್ಯ ಕಾರ್ಯದರ್ಶಿ ಮೈಕ್ ಪೊಂಪಿಯೋ ಈ ಸಲಹೆ ತಿರಸ್ಕರಿಸಿದ್ದಾರೆ.