ಪೇಶಾವರ(ಪಾಕಿಸ್ತಾನ): ಭಯೋತ್ಪಾದಕರ ದಾಳಿಗೆ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಮಂಗಳವಾರ ಮತ್ತು ಬುಧವಾರ ಸುಮಾರು 8 ಮಂದಿ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದು, ಓರ್ವ ವ್ಯಕ್ತಿ ಗಾಯಗೊಂಡಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಕುರ್ರಂ ಜಿಲ್ಲೆಯಲ್ಲಿ ಪಾಕ್-ಅಫ್ಘಾನಿಸ್ತಾನದ ಗಡಿಯನ್ನು ದಾಟಲು ಭಯೋತ್ಪಾದಕರು ಯತ್ನಿಸಿದ್ದು, ಪಾಕ್ ಸಶಸ್ತ್ರ ಪಡೆಗಳು ವಿಫಲಗೊಳಿಸಿವೆ. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ (ISPR) ಮಾಹಿತಿ ನೀಡಿದೆ. ಮಂಗಳವಾರ ಭಯೋತ್ಪಾದಕರ ದಾಳಿ ನಡೆದಿದ್ದು, ಜನನಿಬಿಡ ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದ ನಾಲ್ವರು ಪೊಲೀಸ್ ಕಾನ್ಸ್ಟೇಬಲ್ಗಳು ಸಾವನ್ನಪ್ಪಿದ್ದಾರೆ.
ಮತ್ತೊಂದು ಘಟನೆಯಲ್ಲಿ, ಪೊಲೀಸ್ ಅಧಿಕಾರಿಯ ಮೇಲೆ ದಾಳಿ ನಡೆಸಲಾಗಿದೆ. ಬೈಕ್ನಲ್ಲಿ ಬಂದ ಭಯೋತ್ಪಾದಕರು ಪೊಲೀಸ್ ವ್ಯಾನ್‌ಗೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ ಎಂದು ಡಾನ್ ವರದಿ ಮಾಡಿದೆ. ಇದಾದ ನಂತರ ದಾಳಿಕೋರರಿಗಾಗಿ ಪೊಲೀಸರು ತನಿಖೆ ನಡೆಸಿದ್ದಾರೆ.
ಉತ್ತರ ವಜಿರಿಸ್ತಾನ್ ಜಿಲ್ಲೆಯ ಮೂರು ವಿವಿಧ ಪ್ರದೇಶಗಳಲ್ಲಿ ಬುಧವಾರ ನಡೆದ ಬಾಂಬ್ ದಾಳಿಯಲ್ಲಿ ಇಬ್ಬರು ಪಾಕ್ ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು ಇನ್ನೊಬ್ಬರು ಗಾಯಗೊಂಡಿದ್ದಾರೆ ಸರ್ಕಾರದ ಪ್ರಕಟಣೆಯೊಂದು ಮಾಹಿತಿ ನೀಡಿದೆ. ಆಫ್ಘನ್ ಗಡಿಯ ಬಳಿಯಿರುವ ದೇಗಾನ್ ಪ್ರದೇಶದ ರಸ್ತೆಬದಿಯಲ್ಲಿ ನಡೆದ ಸ್ಫೋಟದಲ್ಲಿ ಒಬ್ಬ ಯೋಧ ಸಾವನ್ನಪ್ಪಿದ್ದು, ರಜ್ಮಾಕ್ ತೆಹ್ಸಿಲ್‌ನ ಗರಿಯಮ್ ಪ್ರದೇಶದಲ್ಲಿ ಸಂಭವಿಸಿದ ಮತ್ತೊಂದು ಸ್ಫೋಟದಲ್ಲಿ ಇನ್ನೊಬ್ಬ ಯೋಧ ಸಾವನ್ನಪ್ಪಿದ್ದಾನೆ.
ಇದನ್ನೂ ಓದಿ: ಸಾವಿರಾರು ಕ್ವಿಂಟಲ್ ಕಿತ್ತಳೆ ರಸ್ತೆ ಬದಿ ಸುರಿದ ರೈತರು: ಕಾರಣ ಇಲ್ಲಿದೆ..