ಟೋಕಿಯೋ(ಜಪಾನ್): ಟೋಕಿಯೊ ಒಲಿಂಪಿಕ್ ಸಂಘಟನಾ ಸಮಿತಿಯ ಸಿಬ್ಬಂದಿಯೊಬ್ಬರು ಕೊರೊನಾ ರೋಗಕ್ಕೆ ತುತ್ತಾಗಿದ್ದು, ಧನಾತ್ಮಕ ಪರೀಕ್ಷೆ ಬಳಿಕ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ.
ಟೋಕಿಯೊ ಸಂಘಟಕರು ಇಂದು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಈ ವ್ಯಕ್ತಿ 30 ರ ಹರೆಯದ ಪುರುಷ ಉದ್ಯೋಗಿಯಾಗಿದ್ದು, ಟೋಕಿಯೊದ ಹರೂಮಿ ಎಂದು ಕರೆಯಲ್ಪಡುವ ಒಂದು ಭಾಗದ ಪ್ರಧಾನ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು ಎಂದು ತಿಳಿಸಿದ್ದಾರೆ.
ಸಾಂಕ್ರಾಮಿಕ ರೋಗದಿಂದಾಗಿ ಟೋಕಿಯೋ ಒಲಿಂಪಿಕ್ಸ್ನ್ನು ಕಳೆದ ತಿಂಗಳು 2021 ರವರೆಗೆ ಮುಂದೂಡಲಾಗಿತ್ತು. ಈ ಸಮಿತಿಯಲ್ಲಿ ಸುಮಾರು 3,500 ಜನರು ಕೆಲಸ ನಿರ್ವಹಿಸುತ್ತಿದ್ದು, ಕಳೆದ ಕೆಲ ವಾರಗಳಿಂದ ಸಿಬ್ಬಂದಿಗಳೆಲ್ಲರೂ ಮನೆಯಲ್ಲೇ ಇದ್ದುಕೊಂಡು ಕೆಲಸ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.
ಕೊರೊನಾ ಸೋಂಕು ತಗುಲಿದ ವ್ಯಕ್ತಿಯ ನಿವಾಸದ ಬಳಿ ಇರುವ ಸಾರ್ವಜನಿಕರಿಗೂ ಈ ಬಗ್ಗೆ ಎಚ್ಚರಿಕೆ ನೀಡಲಾಗಿದ್ದು, ಸೋಂಕಿತ ವ್ಯಕ್ತಿಗೂ ಹಾಗೂ ಆತನ ಕುಟಂಬದವರೊಂದಿಗಿನ ಸಂಪರ್ಕವನ್ನು ತಾತ್ಕಾಲಿಕವಾಗಿ ತಡೆಯಲಾಗಿದೆ ಎಂದು ಸಮಿತಿ ವಿವರಣೆ ನೀಡಿದೆ.
ಜುಲೈ 23, 2021 ರಂದು ಒಲಿಂಪಿಕ್ಸ್ ಪ್ರಾರಂಭವಾಗಲಿದೆ ಎಂದು ಸಮಿತಿ ಈ ಹಿಂದೆ ತಿಳಿಸಿತ್ತು, ಆದರೆ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಇದು ಸಾಧ್ಯವಾಗಲಿದೆಯೇ ಎಂಬ ಪ್ರಶ್ನೆಗಳು ಸದ್ಯ ಎಲ್ಲರನ್ನು ಕಾಡತೊಡಗಿದೆ.
ಏತನ್ಮಧ್ಯೆ, ಟೋಕಿಯೊ ಒಲಿಂಪಿಕ್ ಕ್ರೀಡಾಕೂಟವನ್ನು 2022 ರ ಬದಲು 2021 ಕ್ಕೆ ನಿಗದಿಪಡಿಸಲಾಗಿದೆ ಎಂದು ಐಒಸಿ ಸೋಮವಾರ ವಿವರಿಸಿದೆ.