ಬೀಜಿಂಗ್: ಚೀನಾ 2022ರಲ್ಲಿ ತನ್ನ ಮಿಲಿಟರಿ ಬಜೆಟ್ ಅನ್ನು ಶೇ. 7.1ರಷ್ಟು (ಯುಎಸ್ಡಿ 229.5 ಬಿಲಿಯನ್) ಹೆಚ್ಚು ಮಾಡಲಿದೆ ಎಂದು ಶನಿವಾರ ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ನ ವಾರ್ಷಿಕ ಅಧಿವೇಶನದಲ್ಲಿ ಬಿಡುಗಡೆಗೊಳಿಸಿದ ಕರಡು ಬಜೆಟ್ ಪ್ರಸ್ತಾವನೆಯಲ್ಲಿ ತಿಳಿಸಿದೆ.
ಈ ಹಿಂದಿನ ಎರಡು ವರ್ಷಗಳಲ್ಲಿ ಕೋವಿಡ್ ಮಹಾಮಾರಿ ಚೀನಾದ ಆರ್ಥಿಕ ಬೆಳವಣಿಗೆಯ ಮೇಲೆ ಹೆಚ್ಚು ಪರಿಣಾಮ ಬೀರಿದ್ದರೂ, 2021ರಲ್ಲಿ 1.35 ಟ್ರಿಲಿಯನ್ ಯುವಾನ್ ಅಂದರೆ ಶೇ. 6.8ರಷ್ಟು ರಕ್ಷಣಾ ಬಜೆಟ್ ಅನ್ನು ಹೆಚ್ಚು ಮಾಡಿತ್ತು. 2020ರಲ್ಲಿ ಜಾಸ್ತಿ ಮಾಡಿದ್ದ ಶೇ 6.6ಕ್ಕಿಂತ ಸ್ವಲ್ಪ ಜಾಸ್ತಿಯೇ 2021ರಲ್ಲಿ ಮಾಡಿತ್ತು ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ. ಚೀನಾ ತನ್ನ ಮಿಲಿಟರಿ ಪಡೆಯನ್ನು ಇನ್ನಷ್ಟು ಆಧುನೀಕರಣಗೊಳಿಸುವುದರೊಂದಿಗೆ ಸುಧಾರಿತ ಆಯುಧಗಳ ಹಾಗೂ ಉತ್ತಮ ಗುಣಮಟ್ಟದ ಯುದ್ಧ ಸಲಕರಣೆಗಳ ಸಂಗ್ರಹಣೆ, ವಾಸ್ತವಿಕ ಯುದ್ಧ ಆಧಾರಿತ ತರಬೇತಿಯನ್ನು ಬಲಪಡಿಸಲು ಮತ್ತು ಸೇನಾ ಸಿಬ್ಬಂದಿಯ ಅಭಿವೃದ್ಧಿಗೆ ಈ ಹಣವನ್ನು ವ್ಯಯಿಸುತ್ತದೆ ಎಂದು ತಜ್ಞರ ವರದಿ ತಿಳಿಸಿದೆ.
ಕೇಂದ್ರ ಮಟ್ಟದಲ್ಲಿ ತಯಾರಾದ ಬಜೆಟ್ ಕರಡು ಪ್ರತಿಯಲ್ಲಿ 1.45045 ಟ್ರಿಲಿಯನ್ ಯುವಾನ್ (ಯುಎಸ್ಡಿ 229.5 ಬಿಲಿಯನ್) (ಶೇ.7.1) ರಾಷ್ಟ್ರೀಯ ಭದ್ರತೆಗೆ ಮೀಸಲಿಟ್ಟಿದೆ. ಇದರ ಜೊತೆಗೆ 2022ರಲ್ಲಿ ಮಿಲಿಟರಿ ಶಿಕ್ಷಣ ಹಾಗೂ ಯುದ್ಧ ತರಬೇತಿಯನ್ನು ಇನ್ನಷ್ಟು ಬಲಗೊಳಿಸುವ ಯೋಜನೆಯನ್ನು ಚೀನಾ ರೂಪಿಸಿದೆ. ಯುನೈಟೆಡ್ ಸ್ಟೇಟ್ಸ್ನ ನಂತರ ವಿಶ್ವದ ಎರಡನೇ ಅತೀ ಹೆಚ್ಚು ಮಿಲಿಟರಿ ಬಜೆಟ್ ಅನ್ನು ಹೊಂದಿರುವ ಚೀನಾ ದೀರ್ಘಾವಧಿಗೆ ಪರಮಾಣು ಸಾಮರ್ಥ್ಯದ ಕ್ಷಿಪಣಿಗಳು ಹಾಗೂ ತನ್ನ ಸಾಮರ್ಥ್ಯದ ಗಡಿಯನ್ನು ಮೀರಿ ಶಕ್ತಿ ಗಳಿಸಲು ಅಗತ್ಯವಿರುವ ಆಯುಧಗಳ ಮೇಲೆ ಹೆಚ್ಚು ಹೂಡಿಕೆ ಮಾಡುತ್ತಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
'ನನ್ನ ಪ್ರಕಾರ ಈ ವರ್ಷದ ಒಟ್ಟು ದೇಶೀಯ ಉತ್ಪನ್ನದಲ್ಲಿ(ಜಿಡಿಪಿ) ಕಳೆದ ವರ್ಷದ ಶೇ. 8.1ರಷ್ಟು ಬೆಳವಣಿಗೆ ಸಾಧ್ಯವಿಲ್ಲ. ನಮ್ಮ ಗುರಿ ಶೇ. 5 ರಿಂದ 6ರಷ್ಟು ಮಾತ್ರ. ಬೇರೆ ದಾರಿಯೇ ಇಲ್ಲ. ನನಗನಿಸಿದಂತೆ ಕಳೆದ ವರ್ಷಕ್ಕಿಂತ ಹೆಚ್ಚು ಚೀನಾ ಈ ವರ್ಷ ತನ್ನ ಮಿಲಿಟರಿ ಬಜೆಟ್ ಬೆಳವಣಿಗೆಯನ್ನು ಕಡಿತಗೊಳಿಸುತ್ತದೆ' ಎಂಬ ಚೀನಾದ ಮಿಲಿಟರಿ ತಜ್ಞ ಸಾಂಗ್ ಝೋಂಗ್ಪಿಂಗ್ ಮಾತನ್ನು ಗ್ಲೋಬಲ್ ಟೈಮ್ಸ್ ಉಲ್ಲೇಖಿಸಿದೆ.
ಮುಂದಿನ ಐದು ವರ್ಷಗಳಲ್ಲಿ ರಾಷ್ಟ್ರೀಯ ರಕ್ಷಣಾ ಮತ್ತು ಸಶಸ್ತ್ರ ಪಡೆಗಳ ಆಧುನೀಕರಣದಲ್ಲಿ ಗಮನಾರ್ಹ ಬೆಳವಣಿಗೆಯನ್ನು ತರುವುದು 14ನೇ ಪಂಚವಾರ್ಷಿಕ ಯೋಜನೆಯ ಆರ್ಥಿಕತೆ ಮತ್ತು ಸಮಾಜ ಅಭಿವೃದ್ಧಿಯ ಮುಖ್ಯ ಗುರಿಗಳಲ್ಲಿ ಒಂದಾಗಿದೆ ಎಂದು ಬೀಜಿಂಗ್ನಲ್ಲಿ ಅಕ್ಟೋಬರ್ನಲ್ಲಿ ನಡೆದ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದ 19ನೇ ಕೇಂದ್ರ ಸಮಿತಿಯ ಐದನೇ ಸಮಗ್ರ ಅಧಿವೇಶನದಲ್ಲಿ ಹೇಳಲಾಗಿತ್ತು.