ಬೀಜಿಂಗ್: ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡನ್ ಆಡಳಿತದಲ್ಲಿ ಚೀನಾದೊಂದಿಗೆ ದ್ವಿಪಕ್ಷೀಯ ಸಂಬಂಧಗಳು ಮತ್ತು ಸಹಕಾರ ಪುನಾರಂಭವಾಗುವ ವಿಶ್ವಾಸವಿದೆ ಎಂದು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಚೀನಾ-ಅಮೆರಿಕ ಸಂಬಂಧಗಳು ಹೆಚ್ಚು ಸಮಸ್ಯೆಗಳೊಂದಿಗೆ ಸಾಗುತ್ತಿವೆ. ಚೀನಾದೊಂದಿಗೆ ನಡೆದಿದ್ದ ಶೀತಲ ಸಮರ ಕೇವಲ ಎರಡು ದೇಶಗಳಿಗೆ ಮಾತ್ರ ಸಂಬಂಧಿತವಾಗಿದ್ದಲ್ಲ. ಇಡೀ ಜಗತ್ತಿಗೆ ತೀವ್ರ ಅಡೆತಡೆಗಳನ್ನು ಉಂಟು ಮಾಡಿದೆ ಎಂದು ವಾಂಗ್ ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕದ ಕೆಲ ನಿಲುವುಗಳಿಗೆ ನಾವು ಬೆಂಬಲ ನೀಡಿಲ್ಲ. ಜೊತೆಗೆ ಚೀನಾದ ಕೆಲವು ನೀತಿಗಳು ಅಮೆರಿಕ ಸ್ಥಿರ ಹಾಗೂ ಸುಸ್ಥಿರವಾಗಲು ಸಹಕಾರಿಯಾಗುವಂತಿದ್ದವು. ಸಮನ್ವಯತೆ, ಸಹಕಾರ ಹಾಗೂ ಸ್ಥಿರತೆಯ ಆಧಾರದ ಮೇಲೆ ಯುಎಸ್‌ನೊಂದಿಗೆ ಸಂಬಂಧ ಮುಂದುವರಿಸಲು ಸಿದ್ಧರಿರುವುದಾಗಿ ಅವರು ಹೇಳಿದ್ದಾರೆ.
ಚೀನಾ ವೇಗದ ಅಭಿವೃದ್ಧಿಯನ್ನು ಅಮೆರಿಕದ ಕೆಲವರು ಸಹಿಸಲಿಲ್ಲ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಅದೇನೇ ಇರಲಿ ಸ್ವಬೆಳವಣಿಗೆಗಾಗಿ ಉತ್ತಮ ಮಾರ್ಗವೊಂದನ್ನು ಮುಂದುವರಿಸುವ ಅವಶ್ಯಕತೆ ಇದೆ ಎಂದು ವಾಂಗ್ ಯಿ ಪ್ರತಿಪಾದಿಸಿದ್ದಾರೆ.