ಬೀಜಿಂಗ್ : ಜಗತಿನಲ್ಲಿ ಪ್ರಥಮ ಬಾರಿಗೆ 5ಜಿ ತಂತ್ರಜ್ಞಾನದ ನೆರವಿನಿಂದ 3,000 ಕಿ.ಮೀ. ಅಂತರದಿಂದಲೇ ರೋಗಿಯೊಬ್ಬರಿಗೆ 'ದೂರಸ್ಥ' (ರಿಮೋಟ್) ಶಸ್ತ್ರಚಿಕಿತ್ಸೆಯನ್ನು ಚೀನಾದ ವೈದ್ಯಕೀಯ ತಂಡ ಯಶಸ್ವಿಯಾಗಿ ನಡೆಸಿದೆ.
ಚೀನಾದ ಟೆಕ್ ಕಂಪನಿಗಳಾದ ಹುವಾವೇ ಮತ್ತು ಚೀನಾ ಮೊಬೈಲ್ ಹಾಗೂ ಪಿಎಲ್ಎ ಜನರಲ್ ಆಸ್ಪತ್ರೆಯ ಸಹಭಾಗಿತ್ವದಲ್ಲಿ ರೋಗಿಯೊಬ್ಬರಿಗೆ 5ಜಿ ತಂತ್ರಜ್ಞಾನದಡಿ ದೂರಸ್ಥ (ರಿಮೋಟ್) ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ದಕ್ಷಿಣ ಚೀನಾದ ಸರ್ಜನ್ ಲಿಂಗ್ ಝಿಪ್ ಅವರು ಶಸ್ತ್ರ ಚಿಕಿತ್ಸೆ ನಡೆಸಿದ್ದರು ಎಂದು ಇಲ್ಲಿನ ಸ್ಥಳೀಯ ಮಾಧ್ಯಮ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.
ಪಾರ್ಕಿನ್ಸನ್ ರೋಗದಿಂದ ಬಳಲುತ್ತಿದ್ದ ವ್ಯಕ್ತಿಗೆ ನರ-ಉತ್ತೇಜಕ (ನ್ಯೂರೋ- ಸ್ಟಿಮ್ಯೂಲೆಟರ್) ಅಥವಾ ಮೆದುಳು ನಿಯಂತ್ರಕ ವೈದ್ಯಕೀಯ ಸಲಕರಣೆ ಅಳವಡಿಸಲಾಗಿತ್ತು. 5ಜಿ ತಂತ್ರಜ್ಞಾನ ಮೂಲಕ ಪ್ರಸಾರವಾಗುವ ಟ್ರಾನ್ಸ್ಮಿಟೆಡ್ ಇಮೇಜ್ನಡಿ ಸತತ ಮೂರು ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಯಿತು ಎಂದು ಪಿಎಲ್ಎ ಜನರಲ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಹುವಾವೇ ಮತ್ತು ಚೀನಾ ಮೊಬೈಲ್ ಒದಗಿಸಿದ ಕಡಿಮೆ ಲಘುತ್ವದ 5-ಜಿ ತಂತ್ರಜ್ಞಾನ ನೆರವಿನಿಂದ ಈ ಶಸ್ತ್ರ ಚಿಕಿತ್ಸೆ ನಡೆಸಲು ಸಾಧ್ಯವಾಯಿತು ಎಂದು ವೈದ್ಯರು ಸ್ಮರಿಸಿದರು.
'ನಾನು ಇದನ್ನು ನೈಜ ಅವಧಿಯ ಶಸ್ತ್ರ ಚಿಕಿತ್ಸೆಯೆಂದೇ ಭಾವಿಸಿದ್ದೇನೆ. ಶಸ್ತ್ರ ಚಿಕಿತ್ಸೆ ಅವಧಿಯಲ್ಲಿ ರೋಗಿಯು 3,000 ಕಿ.ಮೀ ದೂರದಲ್ಲಿ ಇದ್ದಾನೆ ಎಂದು ನನಗೆ ಅನಿಸಲಿಲ್ಲ. ರೋಗಿಯ ಆರೋಗ್ಯ ಸ್ಥಿರವಾಗಿದೆ' ಎಂದು ಶಸ್ತ್ರ ಚಿಕಿತ್ಸೆ ನೆರವೇರಿಸಿದ ಲಿಂಗ್ ಝಿಪ್ ಹೇಳಿದ್ದಾರೆ.
ಕಳೆದ ವರ್ಷ ದಕ್ಷಿಣ ಚೀನಾದ ಫುಝೌದಲ್ಲಿ ವೈದ್ಯರ ತಂಡ 5ಜಿ ತಂತ್ರಜ್ಞಾನದ ಸಹಾಯದಿಂದ ಎರಡು ರೋಬೋಟ್ಗಳನ್ನು ಬಳಸಿಕೊಂಡು ಹಂದಿಯ ಯಕೃತಿಯನ್ನು ಶಸ್ತ್ರ ಚಿಕಿತ್ಸೆ ಒಳಪಡಿಸಿತ್ತು. ಇದರಲ್ಲಿ ಆ ತಂಡ ಯಶ ಕಂಡಿತ್ತು. ಜೊತೆಗೆ ಇದು 5ಜಿ ಟೆಕ್ನಾಲಜಿ ನೆರವಿನಿಂದ ಪ್ರಾಣಿಯ ಮೇಲೆ ಜಗತಿನ ಪ್ರಥಮ ದೂರಸ್ಥ ಶಸ್ತ್ರಚಿಕಿತ್ಸೆ ಆಗಿತ್ತು. ಈ ಗೆಲುವಿನ ಬೆನ್ನಲ್ಲೇ ಇದೇ ರಾಷ್ಟ್ರದ ವೈದ್ಯರು ಪ್ರಥಮ ಬಾರಿಗೆ ಮಾನವನ ಮೇಲೆ 5ಜಿ ತಂತ್ರಜ್ಞಾನದ ದೂರಸ್ಥ ಶಸ್ತ್ರ ಚಿಕಿತ್ಸೆ ನೆರವೇರಿಸಿದ್ದಾರೆ.