ಬೀಜಿಂಗ್: ಬೆಕ್ಕುಗಳಿಗೆ ಕೋವಿಡ್ ಸೋಂಕು ಬಲು ಬೇಗನೆ ಹರಡಬಹುದು ಎಂಬ ಅಂಶವನ್ನು ಚೀನಾದ ಸಂಶೋಧಕರು ಕಂಡುಹಿಡಿದಿದ್ದಾರೆ. ಅದರೊಂದಿಗೆ ಬೆಕ್ಕುಗಳು ವೈರಸ್ ವಿರುದ್ಧ ಹೋರಾಡುವ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿವೆಯಂತೆ.
ಚೀನಾದ ಹುವಾಜೊಂಗ್ ಕೃಷಿ ವಿಶ್ವವಿದ್ಯಾಲಯದ ಸಂಶೋಧಕರು, 102 ಬೆಕ್ಕುಗಳ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಿದ್ದಾರೆ. ಇದರೊಂದಿಗೆ ಗಂಟಲು ಹಾಗೂ ಗುದದ ದ್ರವದ ಮಾದರಿಯನ್ನು ಸಹ ಸಂಗ್ರಹಿಸಿ ಪರೀಕ್ಷೆ ನಡೆಸಲಾಗಿತ್ತು. ಬೆಕ್ಕುಗಳಿಂದ ತೆಗೆದ 15 ರಕ್ತದ ಮಾದರಿಗಳಲ್ಲಿ ಕೋವಿಡ್ -19 ಪ್ರತಿಕಾಯಗಳು ಇರುವುದು ಪತ್ತೆಯಾಗಿದೆ ಎಂದು ಎಮರ್ಜಿಂಗ್ ಮೈಕ್ರೋಬ್ಸ್ & ಇನ್ಫೆಕ್ಷನ್ಸ್ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನದ ವರದಿಯಲ್ಲಿ ತಿಳಸಲಾಗಿದೆ. ಇವುಗಳಲ್ಲಿ 11 ಬೆಕ್ಕುಗಳಲ್ಲಿ ವೈರಸ್ ಅನ್ನು ನಿರ್ನಾಮ ಮಾಡುವ ಪ್ರತಿಕಾಯಗಳು ಪತ್ತೆಯಾಗಿವೆ.
ವಿಶೇಷವೆಂದರೆ, ಈ ಯಾವುದೇ ಬೆಕ್ಕುಗಳಲ್ಲಿ ಕೋವಿಡ್ ಸೋಂಕು ಪತ್ತೆಯಾಗಿಲ್ಲ. ಅಷ್ಟೇ ಅಲ್ಲ, ಸ್ಪಷ್ಟ ರೋಗಲಕ್ಷಣಗಳೂ ಕಂಡು ಬಂದಿಲ್ಲ. ಇನ್ನೊಂದೆಡೆ ಪರೀಕ್ಷೆಗೊಳಪಡಿಸಿದ ಯಾವುದೇ ಬೆಕ್ಕು ಸಾವನ್ನಪ್ಪಿಲ್ಲ ಎಂದು ಅಧ್ಯಯನ ಹೇಳಿದೆ.
ಮಾದರಿ ಸಂಗ್ರಹಕ್ಕೆ 46 ಬೆಕ್ಕುಗಳನ್ನು ಪ್ರಾಣಿಗಳ ಆಶ್ರಯತಾಣಗಳಿಂದ, 41 ಬೆಕ್ಕುಗಳನ್ನು ಸಾಕು ಪ್ರಾಣಿಗಳ ಆಸ್ಪತ್ರೆ ಹಾಗೂ 15 ಬೆಕ್ಕುಗಳನ್ನು ಕೋವಿಡ್ -19 ರೋಗಿಗಳ ಕುಟುಂಬಗಳಿಂದ ಬಳಸಲಾಗಿದೆ.
ಬೆಕ್ಕುಗಳಿಂದ ಮನುಷ್ಯರಿಗೆ ಸೋಂಕು ಹರಡುವ ಬಗ್ಗೆ ಯಾವುದೇ ಸಾಕ್ಷಿಗಳು ನಮಗೆ ಸಿಕ್ಕಿಲ್ಲ. ಆದರೆ ಮುನ್ನೆಚ್ಚರಿಕಾ ಕ್ರಮಗಳನ್ನು ಅಗತ್ಯವಾಗಿ ತೆಗೆದುಕೊಳ್ಳಬೇಕು ಎಂದು ಸಂಶೋಧಕರು ತಿಳಿಸಿದ್ದಾರೆ.