ಢಾಕಾ (ಬಾಂಗ್ಲಾದೇಶ): ಸಾಮಾಜಿಕ ಜಾಲತಾಣಗಳನ್ನು ದುರುಪಯೋಗಪಡಿಸಿಕೊಂಡು ದುರ್ಗಾ ಪೂಜೆ ಸಂದರ್ಭದಲ್ಲಿ ದೇಗುಲಗಳನ್ನು ಧ್ವಂಸಗೊಳಿಸಿ ವ್ಯಾಪಕ ಹಿಂಸಾಚಾರ ನಡೆಸಿದ ಪ್ರಕರಣದ ಪೊಲೀಸ್ ತನಿಖೆ ಮುಂದುವರೆದಿದೆ. ಈ ನಿಟ್ಟಿನಲ್ಲಿ ಈಗಾಗಲೇ 100 ಮಂದಿಯ ಆರೋಪಿಗಳನ್ನು ಬಂಧಿಸಲಾಗಿದ್ದು, ಆರೋಪಿಗಳು ದುಷ್ಕೃತ್ಯವನ್ನು ಒಪ್ಪಿಕೊಂಡಿದ್ದಾರೆ.
ನಿನ್ನೆ, ಬಂಧಿತರಲ್ಲಿ ಒಬ್ಬನಾದ ಹಬೀಬುಲ್ಲಾ ಮಿಜಾನ್ ನ್ಯಾಯಾಲಯದ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ. ದುರ್ಗಾಪೂಜೆಯ ಸಂದರ್ಭ ತಾನು ಫೇಸ್ಬುಕ್ನಲ್ಲಿ ಮಾಡಿದ್ದ ಪೋಸ್ಟ್ನಿಂದ ಪೀರ್ಗಂಜ್ನ ರಂಗಪುರ ಹಿಂಸಾಚಾರಕ್ಕೆ ಪ್ರಚೋದನೆ ದೊರೆಯಿತು ಎಂದು ಮತ್ತೊಬ್ಬ ಆರೋಪಿ ಶೈಕತ್ ಮಂಡಲ್ ನ್ಯಾಯಾಧೀಶರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಶೈಕತ್ ಸಹಚರ ರಬಿಯುಲ್, ಮೈಕ್ ಮೂಲಕ ಘೋಷಣೆ ಕೂಗಿ ಹಿಂಸಾಚಾರಕ್ಕೆ ಪ್ರಚೋದಿಸಿರುವುದಾಗಿಯೂ ಮಾಹಿತಿ ನೀಡಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ 100 ಮಂದಿಯನ್ನು ಬಂಧಿಸಿದ್ದಾರೆ. ವಿಚಾರಣೆ ನಡೆಸುವ ಸಲುವಾಗಿ ಆರೋಪಿಗಳನ್ನು ಏಳು ದಿನಗಳ ಕಾಲ ಕಸ್ಟಡಿಗೆ ನೀಡಬೇಕೆಂದು ಕೋರಿ ಪೊಲೀಸ್ ಇಲಾಖೆಯು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಹೊಸೈನ್ ಮೊಹಮ್ಮದ್ ರೆಜಾ ಒಂದು ದಿನದ ಮಟ್ಟಿಗೆ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದ್ದಾರೆ ಎಂದು ಹೆಚ್ಚುವರಿ ಉಪ ಆಯುಕ್ತ, ಪ್ರಾಸಿಕ್ಯೂಷನ್ ಎಂಡಿ ಕಮರುಲ್ ಹಸನ್ ಹೇಳಿದ್ದಾರೆ.
ಇದನ್ನೂ ಓದಿ: ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ ಕೋಮು ಹಿಂಸೆಗೆ ಪ್ರಚೋದನೆ: ತಪ್ಪೊಪ್ಪಿಕೊಂಡ ಮುಖ್ಯ ಶಂಕಿತ, ಸಹಚರ
ಅಕ್ಟೋಬರ್ 15 (ಶುಕ್ರವಾರ)ರ ಮಧ್ಯಾಹ್ನದ ಪ್ರಾರ್ಥನೆಯ ನಂತರ, ನೂರಾರು ಜನರು ಅಂದರ್ಕಿಲ್ಲಾ ಜೇಮ್ ಮಸೀದಿಯಿಂದ ಹೊರಬಂದು, ಜೆಎಂ ಸೇನ್ ಹಾಲ್ ಪೂಜಾ ಮಂಟಪದ ಒಳನುಗ್ಗಲು ಯತ್ನಿಸಿದ್ದಾರೆ.ಈ ಸಂದರ್ಭದಲ್ಲಿ ಆಕ್ರೋಶಗೊಂಡಿದ್ದ ಗುಂಪು ಕಲ್ಲು ತೂರಾಟ ನಡೆಸಿ, ದೇಗುಲದ ಪೋಸ್ಟರ್, ಬ್ಯಾನರ್ ಹರಿದು ಹಾಕಿದೆ. ಪರಿಸ್ಥಿತಿ ಹತೋಟಿಗೆ ತರಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದು, ಲಾಠಿ ಚಾರ್ಜ್ ಮಾಡಿದ್ರು. ಈ ಸಮಯದಲ್ಲಿ ಒಂದು ಗುಂಪು ಪೊಲೀಸರ ಮೇಲೆ ಹಲ್ಲೆಗೂ ಯತ್ನಿಸಿತು.
ಇದನ್ನೂ ಓದಿ: ಬಾಂಗ್ಲಾ ಕೋಮು ಹಿಂಸಾಚಾರ: ತಪ್ಪೊಪ್ಪಿಕೊಂಡ ಜಮಾತ್ ಮುಖಂಡ
ಈ ಸಂಬಂಧ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, 83 ಜನರನ್ನು ಆರೋಪಿಗಳೆಂದು ಹೆಸರಿಸಲಾಗಿದೆ. 500 ಅನಾಮಧೇಯರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಸಬ್ ಇನ್ಸ್‌ಪೆಕ್ಟರ್ ಆಕಾಶ್ ಮಹಮೂದ್ ಫರೀದ್ ತಿಳಿಸಿದ್ದಾರೆ.