ಕಾಬೂಲ್(ಅಫ್ಘಾನಿಸ್ತಾನ): ಮಸೀದಿಯೊಂದರಲ್ಲಿ ಆತ್ಮಾಹುತಿ ದಾಳಿ ನಡೆದು ಕನಿಷ್ಠ 46 ಮಂದಿ ಮೃತಪಟ್ಟು ಸಾಕಷ್ಟು ಮಂದಿ ಗಾಯಗೊಂಡಿರುವ ಘಟನೆ ಅಫ್ಘಾನಿಸ್ತಾನದ ಈಶಾನ್ಯ ಭಾಗದಲ್ಲಿರುವ ಕುಂಡುಝ್ ನಗರದಲ್ಲಿ ನಡೆದಿದೆ.
ಇಲ್ಲಿ ತಾಲಿಬಾನ್ ಸರ್ಕಾರ ಸ್ಥಾಪನೆಯಾದಾಗಿನಿಂದ ಇದು ಅತ್ಯಂತ ಭೀಕರ ದಾಳಿಯಾಗಿದೆ. ಇಸ್ಲಾಮಿಕ್ ಸ್ಟೇಟ್ಸ್ ಭಯೋತ್ಪಾದಕ ಸಂಘಟನೆ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದು, ತಾಲಿಬಾನ್ ಮತ್ತು ಐಎಸ್ ನಡುವಿನ ತಿಕ್ಕಾಟಕ್ಕೆ ಮುಂದಿನ ದಿನಗಳಲ್ಲಿ ಕಾರಣವಾಗುವ ಸಾಧ್ಯತೆಯಿದೆ.
ಶುಕ್ರವಾರ ಮಧ್ಯಾಹ್ನದ ಪ್ರಾರ್ಥನೆಯ ಸಮಯದಲ್ಲಿ ಕುಂಡುಝ್ನ ನಗರದ ಮಸೀದಿಯಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಪ್ರಾರ್ಥನೆ ಮಾಡುತ್ತಿದ್ದವರ ದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ರಕ್ತದ ಕಲೆಗಳು ಗೋಡೆಗೆ ಅಂಟಿಕೊಂಡಿವೆ ಹಾಗೂ ಮಸೀದಿಯ ಕಿಟಕಿಗಳು ಒಡೆದಿವೆ.
ದಾಳಿ ಏಕೆ..?
ಶಿಯಾಗಳನ್ನು ಮತ್ತು ತಾಲಿಬಾನಿಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಇಸ್ಲಾಮಿಕ್ ಸ್ಟೇಟ್ಸ್ ಹೇಳಿಕೊಂಡಿದ್ದು, ದಾಳಿ ನಡೆಸಿದ ವ್ಯಕ್ತಿಯನ್ನು ಉಯ್ಘರ್ ಮುಸ್ಲಿಂ ಸಮುದಾಯಕ್ಕೆ ಸೇರಿದವನು ಎಂದು ಗುರುತಿಸಲಾಗಿದೆ.
ಚೀನಾ ಈಗಾಗಲೇ ಉಯ್ಘರ್ ಮುಸ್ಲೀಮರ ಸ್ವಾತಂತ್ರ್ಯ ಹರಣ ಮಾಡುತ್ತಿದ್ದು, ಚೀನಾದ ಬೇಡಿಕೆಯಂತೆ ಉಯ್ಘರ್ಗಳನ್ನು ಗಡಿಪಾರು ಮಾಡಲು ತಾಲಿಬಾನ್ ಮುಂತಾದ ಕಾರಣದಿಂದಾಗಿ ಈ ದಾಳಿ ನಡೆಸಲಾಗಿದೆ ಎಂದು ಐಎಸ್ ಸಂಪರ್ಕದಲ್ಲಿರುವ ಆಮಖ್ ನ್ಯೂಸ್ ಏಜೆನ್ಸಿ ಮಾಹಿತಿ ನೀಡಿದೆ.