ವಾಷಿಂಗ್ಟನ್: ಕೋವಿಡ್-19 ನಿಂದಾಗಿ ಪ್ರಸ್ತುತ ಜಗತ್ತಿನಾದ್ಯಂತ ಉಂಟಾಗಿರುವ ಆರೋಗ್ಯ ಬಿಕ್ಕಟ್ಟಿಗೆ ಬೀಜಿಂಗ್ ನೇರ ಹೊಣೆ ಎಂದಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಆರಂಭಿಕ ಹಂತದಲ್ಲಿ ಕೊರೊನಾ ವೈರಸ್ ಹರಡುವಿಕೆಯ ಮಾಹಿತಿಯನ್ನು ಚೀನಾ ಮರೆಮಾಚಿದ್ದರಿಂದ ಇಂದು ವಿಶ್ವವೇ ಬೆಲೆ ತೆರುತ್ತಿದೆ ಎಂದು ಆರೋಪಿಸಿದ್ದಾರೆ.
ಕೆಲವು ತಿಂಗಳ ಹಿಂದೆ ಚೀನಾದ ವುಹಾನ್ ಪ್ರದೇಶದಲ್ಲಿ ಮೊದಲ ಕೊರೊನಾ ಪ್ರಕರಣ ಪತ್ತೆಯಾದಾಗಲೇ ಸುಳಿವು ನೀಡಿದ್ದರೆ ಇಷ್ಟೊತ್ತಿಗೆ ಪರಿಸ್ಥಿತಿ ಸುಧಾರಿಸಿರಬಹುದಿತ್ತು. ಎಲ್ಲಿ ಪ್ರಾರಂಭವಾಗಿತ್ತೋ ಅಲ್ಲೇ ತಡೆಯಬಹುದಿತ್ತು. ಆದರೆ, ಚೀನಾ ಸರ್ಕಾರ ಮಾಡಿದ ಈ ತಪ್ಪಿನಿಂದ ಇಂದು ಜನರು ಪರದಾಡುತ್ತಿದ್ದಾರೆ ಎಂದು ಶ್ವೇತಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಟ್ರಂಪ್ ಹೇಳಿದ್ದಾರೆ.
ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿಗೆ ಕಾರಣವಾದ ಕೋವಿಡ್-19ಗೆ ಪ್ರಪಂಚದಾದ್ಯಂತ ಬಲಿಯಾದವರ ಸಂಖ್ಯೆ 10 ಸಾವಿರ ಗಡಿ ದಾಟಿದ್ದು, 145 ದೇಶಗಳಲ್ಲಿ ಸುಮಾರು 2,10,300 ಮಂದಿ ಸೋಂಕಿಗೆ ಒಳಗಾಗಿದ್ದಾರೆ.