ಮುಂಬೈ(ಮಹಾರಾಷ್ಟ್ರ): ಇಲ್ಲಿನ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಏಕ್ ಹೈ ತೊ ಸೇಫ್ ಹೈ ಎಂಬ ಘೋಷಣೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಟೀಕಾಪ್ರಹಾರ ನಡೆಸಿದರು.
ಬಾಂದ್ರಾದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿ ಅವರು, ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಸಿದ್ಧಾಂತಗಳ ಚುನಾವಣೆಯಾಗಿದೆ. ಏಕೆಂದರೆ ಇದು ಎರಡ್ಮೂರು ಜನ ಕೋಟ್ಯಧಿಪತಿಗಳು ಮತ್ತು ಬಡವರ ನಡುವಿನ ಹೋರಾಟವಾಗಿದೆ. ಮುಂಬೈನಲ್ಲಿ ಕೋಟ್ಯಂತರ ರೂ ಮೌಲ್ಯದ ಭೂಮಿಯನ್ನು ಕಬಳಿಸಲು ಪ್ರಯತ್ನಿಸುತ್ತಿರುವ ಅದಾನಿಯಂತಹ ಕೋಟ್ಯಧಿಪತಿಗಳಿಗಾಗಿ ಸರ್ಕಾರ ಕೆಲಸ ಮಾಡುತ್ತದೆ ಎಂದು ದೂರಿದರು.
ಪ್ರಧಾನಿಗಳ ಎಲ್ಲ ಪಯತ್ನಗಳನ್ನು ವಿಫಲಗೊಳಿಸುತ್ತೇವೆ: ಕಾಂಗ್ರೆಸ್ ಯಾವಾಗಲೂ ಬಡವರು ಮತ್ತು ಸಾಮಾನ್ಯ ಜನರಿಗಾಗಿ ಹೋರಾಡಿದೆ. ಧಾರಾವಿ ಭೂಮಿಯನ್ನು ಕಾರ್ಪೊರೇಟ್ಗಳಿಗೆ ಹಸ್ತಾಂತರಿಸುವ ಮೂಲಕ ಸಣ್ಣ, ಮಧ್ಯಮ ಮತ್ತು ಅತಿಸಣ್ಣ ಕೈಗಾರಿಕೆಗಳ(ಎಂಎಸ್ಎಂಇ) ಬೆನ್ನೆಲುಬು ಮುರಿಯುವ ಪ್ರಯತ್ನ ಮಾಡಲಾಗುತ್ತಿದೆ. ಇದಕ್ಕೆ ಕಾಂಗ್ರೆಸ್ ಎಂದಿಗೂ ಅವಕಾಶ ನೀಡುವುದಿಲ್ಲ. ನಾವು ಈ ಪ್ರಯತ್ನವನ್ನು ವಿಫಲಗೊಳಿಸುತ್ತೇವೆ ಎಂದು ಹೇಳಿದರು.
ಅದಾನಿ ಜೊತೆಗಿರುವ ಫೋಟೋ ಪ್ರದರ್ಶಿಸಿ ಟಾಂಗ್: ಪ್ರಧಾನಿ ಮೋದಿಯವರ ಏಕ್ ಹೈ ತೊ ಸೇಫ್ ಹೈ ಘೋಷಣೆ ಸರಿಯಾಗಿದೆ. ಏಕೆಂದರೆ ಅವರು ಮತ್ತು ಅದಾನಿ ಒಂದಾಗಿದ್ದಾರೆ. ನಂತರ ಅವರು ಸುರಕ್ಷಿತವಾಗಿರುತ್ತಾರೆ. ಧಾರಾವಿ ಭೂಮಿ ಸ್ಥಳೀಯರ ಒಡೆತನದಲ್ಲಿದೆ ಮತ್ತು ಭೂಮಿಯನ್ನು ಹಸ್ತಾಂತರಿಸಿದರೆ ಲಕ್ಷಾಂತರ ಜನರು ಸ್ಥಳಾಂತರಗೊಳ್ಳಬೇಕಾಗುತ್ತದೆ ಎಂದ ಅವರು, ಲಾಕರ್‌ನೊಳಗಿನಿಂದ ಅದಾನಿ ಮತ್ತು ನರೇಂದ್ರ ಮೋದಿ ಅವರು ಜೊತೆಗಿರುವ ಪೋಸ್ಟರ್ ಮತ್ತು ಧಾರಾವಿ ನಕ್ಷೆ ಪೋಸ್ಟರ್ ಪ್ರದರ್ಶಿಸಿದರು.
ಮೋದಿ ಸಹಾಯ ಇಲ್ಲದೇ ಮುಂಬೈ ದೋಚಲು ಸಾಧ್ಯವಿಲ್ಲ - ರಾಹುಲ್: ಅದಾನಿ ವಿಮಾನ ನಿಲ್ದಾಣಗಳು, ಬಂದರುಗಳು ಮತ್ತು ಈಗ ಧಾರಾವಿ ಯೋಜನೆಯನ್ನು ಹೇಗೆ ಪಡೆದರು? ಏಕೆಂದರೆ ಅದಾನಿ ಮತ್ತು ಮೋದಿ ಹಳೆಯ ಸಂಬಂಧಗಳನ್ನು ಹೊಂದಿದ್ದಾರೆ. ಪ್ರಧಾನಿ ಮೋದಿಯವರ ಸಹಕಾರವಿಲ್ಲದೆ ಅದಾನಿಗೆ ಮುಂಬೈಯನ್ನು ದೋಚಲು ಮತ್ತು ಧಾರಾವಿ ಯೋಜನೆಯನ್ನು ಪಡೆಯಲು ಸಾಧ್ಯವಿಲ್ಲ ಎಂದರು.
ಕಾಂಗ್ರೆಸ್ ಜಾತಿ ಗಣತಿಯ ನಡೆಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುತ್ತಿದೆ. ನಾವು ಅಧಿಕಾರಕ್ಕೆ ಬಂದರೆ 50ರಷ್ಟು ಮೀಸಲಾತಿ ಮಿತಿ, ನಿರುದ್ಯೋಗಿ ಯುವಕರಿಗೆ 4 ಸಾವಿರ ನಿರುದ್ಯೋಗ ಭತ್ಯೆ, ಮಹಿಳೆಯರಿಗೆ 3 ಸಾವಿರ ರೂ ಮತ್ತು ಉಚಿತ ಪ್ರಯಾಣದ ಭರವಸೆಗಳನ್ನು ಈಡೇರಿಸಲಾಗುವುದು ಎಂದು ಆಶ್ವಾಸನೆ ನೀಡಿದರು.
ಈ ವೇಳೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ಮಹಾರಾಷ್ಟ್ರ ಕಾಂಗ್ರೆಸ್ ಉಸ್ತುವಾರಿ ರಮೇಶ್ ಚೆನ್ನಿತ್ತಲ, ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್ ಖೇರಾ, ಅವಿನಾಶ್ ಪಾಂಡೆ, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಮುಂಬೈ ಕಾಂಗ್ರೆಸ್ ಅಧ್ಯಕ್ಷೆ ಎಂ.ಪಿ ವರ್ಷಾ ಗಾಯಕ್ವಾಡ್ ಸೇರಿದಂತೆ ಮತ್ತಿರರು ಇದ್ದರು.
ಇದನ್ನೂ ಓದಿ: ಆಮ್ ಆದ್ಮಿ ಪಕ್ಷ ತೊರೆದ ಮರುದಿನ ಬಿಜೆಪಿ ಸೇರಿದ ಕೈಲಾಶ್ ಗೆಹ್ಲೋಟ್