ಚೆನ್ನೈ (ತಮಿಳುನಾಡು): ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮತ್ತು ಎಐಎಡಿಎಂಕೆ ನಡುವೆ ರಾಜಕೀಯ ಮೈತ್ರಿ ಏರ್ಪಟ್ಟಿದೆ ಎಂಬ ವರದಿಗಳು ಹರಿದಾಡುತ್ತಿದ್ದು, ಇದು ಸುಳ್ಳು ಎಂದು ಟಿವಿಕೆ ಪಕ್ಷವು ಸೋಮವಾರ ಸ್ಪಷ್ಟನೆ ನೀಡಿದೆ.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ವಿಜಯ್ ಅವರ ಟಿವಿಕೆ, ಎಐಎಡಿಎಂಕೆ ಜೊತೆ ಒಪ್ಪಂದ ಮಾಡಿಕೊಂಡಿದೆ. ಎರಡೂ ಪಕ್ಷಗಳು ಒಟ್ಟಾಗಿ ಚುನಾವಣೆ ಎದುರಿಸಲಿವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಶುರುವಾಗಿದೆ.
ಇದಕ್ಕೆ ಸ್ಪಷ್ಟನೆ ನೀಡಿರುವ ಟಿವಿಕೆ ಪ್ರಧಾನ ಕಾರ್ಯದರ್ಶಿ ಎನ್.ಆನಂದ್, ಈ ಎಲ್ಲ ವರದಿ, ಚರ್ಚೆಗಳು ಸುಳ್ಳು. ತಮಿಳುನಾಡಿನ ಅಭಿವೃಧ್ಧಿಗಾಗಿ ಟಿವಿಕೆ ಬದ್ಧವಾಗಿದೆ. ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆ ಮಾಡಿ ಬಹುಮತ ಸಾಧಿಸುವ ಮೂಲಕ ಜನರ ಸೇವೆ ಮಾಡುವ ಗುರಿ ಹೊಂದಿದೆ ಎಂದು ಅವರು ಹೇಳಿದರು.
"ತಮಿಳಗ ವೆಟ್ರಿ ಕಳಗಂ ಮತ್ತು ಎಐಎಡಿಎಂಕೆ ನಡುವೆ ಮೈತ್ರಿ ಏರ್ಪಟ್ಟಿದೆ ಎಂಬ ವರದಿಗಳಿವೆ. ಇದು ಸುಳ್ಳು ಮತ್ತು ವದಂತಿ. ಈ ಸುದ್ದಿಗೆ ಯಾವುದೇ ಆಧಾರ ಮತ್ತು ಪುರಾವೆಗಳಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ರಾಜಕೀಯ ವಿಶ್ಲೇಷಕರ ಹೆಸರಿನಲ್ಲಿ ಈ ವದಂತಿ ಹಬ್ಬಿಸಲಾಗುತ್ತಿದೆ. ತಮಿಳುನಾಡು ಜನರು ಇಂತಹ ಸುಳ್ಳು ಸುದ್ದಿಗಳನ್ನು ತಿರಸ್ಕರಿಸುತ್ತಾರೆ ಎಂದಿದ್ದಾರೆ.
ಟಿವಿಕೆ ಖಂಡನಾ ನಿರ್ಣಯ: ನಟ-ರಾಜಕಾರಣಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವು ತನ್ನ ಕಾರ್ಯಕಾರಿ ಮತ್ತು ಜಿಲ್ಲಾ ಕಾರ್ಯದರ್ಶಿಗಳ ಸಭೆಯನ್ನು ಭಾನುವಾರ ನಡೆಸಿತು. ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ 'ಒಂದು ರಾಷ್ಟ್ರ ಒಂದು ಚುನಾವಣೆ', ಡಿಎಂಕೆ ಸರ್ಕಾರದ ನೇತೃತ್ವದಲ್ಲಿ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಳು ಮತ್ತು ಕಳಪೆ ಹಣಕಾಸು ನಿರ್ವಹಣೆ ಖಂಡಿಸಿ ನಿರ್ಣಯ ಅಂಗೀಕರಿಸಿದೆ. ಸಭೆಯಲ್ಲಿ ಒಟ್ಟು 26 ನಿರ್ಣಯಗಳನ್ನು ಪಾಸು ಮಾಡಲಾಗಿದೆ.
ನಟ ವಿಜಯ್ ಅವರು ತಮ್ಮ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವನ್ನು ಅಕ್ಟೋಬರ್ 27 ರಂದು ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಘೋಷಿಸಿದರು. ಸೆಪ್ಟೆಂಬರ್ 8 ರಂದು, ಭಾರತೀಯ ಚುನಾವಣಾ ಆಯೋಗವು ಅಧಿಕೃತವಾಗಿ ತಮಿಳಗ ವೆಟ್ರಿ ಕಳಗಂ ಅನ್ನು ರಾಜಕೀಯ ಪಕ್ಷವಾಗಿ ನೋಂದಾಯಿಸಿತು. ನೋಂದಾಯಿತ ಪಕ್ಷವಾಗಿ ಚುನಾವಣಾ ರಾಜಕೀಯದಲ್ಲಿ ಭಾಗವಹಿಸಲು ಅನುಮತಿಯನ್ನೂ ನೀಡಿದೆ.
ಪಕ್ಷದ ಮುಂದಾಳು ಆಗಿರುವ ವಿಜಯ್ ಅವರು ಆಗಸ್ಟ್ 22 ರಂದು ಟಿವಿಕೆಯ ಧ್ವಜ ಮತ್ತು ಚಿಹ್ನೆಯನ್ನು ಅನಾವರಣಗೊಳಿಸಿದರು. ಎಲ್ಲರಿಗೆ ಸಮಾನತೆ ಎಂಬ ತತ್ವವನ್ನು ಎತ್ತಿ ಹಿಡಿಯುವುದಾಗಿ ಹೇಳಿದರು.
ಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರದ ಅವಧಿ 2026ರಲ್ಲಿ ಮುಗಿಯಲಿದೆ. ಅದೇ ವರ್ಷ ಚುನಾವಣೆ ನಡೆಯಲಿದ್ದು, ರಾಜಕೀಯಕ್ಕೆ ಅಡಿ ಇಟ್ಟಿರುವ ವಿಜಯ್ ಅವರು,ಅದಕ್ಕೂ ಮೊದಲು ಸಜ್ಜಾಗಲು ವಿಧಾನಸಭಾ ಚುನಾವಣಾ ಪೂರ್ವದಲ್ಲೇ ತಮ್ಮ ಪಕ್ಷವನ್ನು ಘೋಷಿಸಿದ್ದಾರೆ.
ಇದನ್ನೂ ಓದಿ: 'ದೆಹಲಿ ಗಾಳಿ ತೀವ್ರ ಕಳಪೆಯಾದರೂ ಕ್ರಮ ವಹಿಸಿಲ್ಲವೇಕೆ?': ಆಪ್ ಸರ್ಕಾರಕ್ಕೆ ಸುಪ್ರೀಂಕೋರ್ಟ್ ತರಾಟೆ