ಕೊಲಂಬೊ: ಶ್ರೀಲಂಕಾದ ಅಧ್ಯಕ್ಷ ಅನುರಾ ಕುಮಾರ ದಿಸ್ಸಾನಾಯಕೆ ಅವರ ಸಮ್ಮುಖದಲ್ಲಿ 21 ಕ್ಯಾಬಿನೆಟ್ ಮಂತ್ರಿಗಳು ಸೋಮವಾರ ಬೆಳಗ್ಗೆ ಅಧ್ಯಕ್ಷೀಯ ಕಾರ್ಯಾಲಯದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಉಪ ಮಂತ್ರಿಗಳು ನಂತರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಈ ಸಂದರ್ಭದಲ್ಲಿ ಘೋಷಿಸಲಾಯಿತು.
ಸೆಪ್ಟೆಂಬರ್ 21 ರ ಅಧ್ಯಕ್ಷೀಯ ಚುನಾವಣೆಯಲ್ಲಿ ದಿಸ್ಸಾನಾಯಕೆ ಗೆದ್ದ ನಂತರ, ಅವರು ಹರಿಣಿ ಅಮರಸೂರ್ಯ ಮತ್ತು ವಿಜಿತಾ ಹೆರಾತ್ ಅವರನ್ನು ಒಳಗೊಂಡ ಕ್ಯಾಬಿನೆಟ್ನೊಂದಿಗೆ ಇಷ್ಟು ದಿನ ಆಡಳಿತ ನಡೆಸಿದ್ದರು. ನವೆಂಬರ್ 14 ರಂದು ನಡೆದ ಸಂಸದೀಯ ಚುನಾವಣೆಯಲ್ಲಿ ನ್ಯಾಷನಲ್ ಪೀಪಲ್ಸ್ ಪವರ್ (ಎನ್ ಪಿಪಿ) ನಿಂದ ಆಯ್ಕೆಯಾದ 159 ಸಂಸತ್ ಸದಸ್ಯರಲ್ಲಿ ಹೊಸ ಕ್ಯಾಬಿನೆಟ್ ಮಂತ್ರಿಗಳನ್ನು ಆಯ್ಕೆ ಮಾಡಲಾಗಿದೆ.
ಅನುಪಾತದ ಪ್ರಾತಿನಿಧ್ಯ ವ್ಯವಸ್ಥೆಯನ್ನು ಪರಿಚಯಿಸಿದ ನಂತರ ರಾಜಕೀಯ ಪಕ್ಷವೊಂದು ಶ್ರೀಲಂಕಾದ ಸಂಸತ್ತಿನಲ್ಲಿ ಮೂರನೇ ಎರಡರಷ್ಟು ಬಹುಮತವನ್ನು ಗೆದ್ದಿರುವುದು ಇದೇ ಮೊದಲು. ಅಮರಸೂರ್ಯ ಹೊಸ ಕ್ಯಾಬಿನೆಟ್ನಲ್ಲಿ ಪ್ರಧಾನಿಯಾಗಿ ಮುಂದುವರೆದಿದ್ದು, ಹೆರಾತ್ ಅವರನ್ನು ವಿದೇಶಾಂಗ ವ್ಯವಹಾರಗಳು, ವಿದೇಶಿ ಉದ್ಯೋಗ ಮತ್ತು ಪ್ರವಾಸೋದ್ಯಮ ಸಚಿವರಾಗಿ ಮರು ನೇಮಕ ಮಾಡಲಾಗಿದೆ.
ಹೊಸ ಕ್ಯಾಬಿನೆಟ್ ಉದ್ದೇಶಿಸಿ ಮಾತನಾಡಿದ ಅಧ್ಯಕ್ಷ ದಿಸ್ಸಾನಾಯಕೆ, ಶ್ರೀಲಂಕಾದ ರಾಜಕೀಯ ಮತ್ತು ಆರ್ಥಿಕ ಪಥವನ್ನು ಬದಲಾಯಿಸಲು ಜನರು ಸೆಪ್ಟೆಂಬರ್ ಮತ್ತು ನವೆಂಬರ್ನಲ್ಲಿ ಎರಡು ಬಾರಿ ಎನ್ಪಿಪಿಗೆ ಮತ ಚಲಾಯಿಸಿದ್ದಾರೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಜನರು ನಮ್ಮ ನೀತಿಗಳು ಮತ್ತು ಪಕ್ಷದ ಸದಸ್ಯರ ಸಮಗ್ರತೆಯ ಆಧಾರದಲ್ಲಿ ಎನ್ಪಿಪಿ ಮೇಲೆ ನಂಬಿಕೆ ಇಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : ಇಮ್ರಾನ್ ಖಾನ್ರೊಂದಿಗೆ ಮಾತುಕತೆ ಇಲ್ಲವೆಂದ ಸೇನೆ: ಪಾಕ್ ಮಾಜಿ ಪ್ರಧಾನಿಗೆ ಜೈಲೇ ಗತಿ