ವಾಷಿಂಗ್ಟನ್ (ಅಮೆರಿಕ): ಕ್ಯಾಪಿಟಲ್ ಮೇಲಿನ ದಾಳಿಗೆ ಕುಮ್ಮಕ್ಕು ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವಿಟ್ಟರ್ ಖಾತೆ ಶಾಶ್ವತವಾಗಿ ರದ್ದುಗೊಳಿಸಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ, ಈ ನಿರ್ಧಾರದ ಹಿಂದೆ ಭಾರತೀಯ ಮೂಲದ ವಿಜಯಾ ಗಡ್ಡೆ ಎಂಬ ಟ್ವಿಟ್ಟರ್ ಕಂಪನಿಯ ವಕೀಲೆಯೂ ಇದ್ದಾರೆ.
ಟ್ರಂಪ್ ಟ್ವೀಟ್ ಮಾಡುವ ಮೂಲಕ ತಮ್ಮ ಬೆಂಬಲಿಗರಿಗೆ ಕ್ಯಾಪಿಟಲ್ ಮೇಲೆ ದಾಳಿ ನಡೆಸುವಂತೆ ಪ್ರೇರೇಪಿಸಿದ್ದಾರೆ ಎಂದಿರುವ ಇವರು, ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸ್ಪಷ್ಟನೆಯನ್ನೂ ನೀಡಿದ್ದಾರೆ.
ಕಂಪನಿಯು ಕಾನೂನು, ನೀತಿ, ನಂಬಿಕೆ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ಟ್ರಂಪ್ ಅವರ ಖಾತೆ ರದ್ದು ಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಹಿಂಸಾಚಾರಗಳು ನಡೆಯುವ ಸಾಧ್ಯತೆಯಿದೆ. ಹಾಗಾಗಿ @realDonaldTrump ಅವರ ಖಾತೆಯನ್ನು ಟ್ವಿಟರ್‌ನಿಂದ ಶಾಶ್ವತವಾಗಿ ಅಮಾನತುಗೊಳಿಸಲಾಗಿದೆ. ಈ ಸಂಬಂಧ ನಮ್ಮ ನೀತಿ ಜಾರಿ ವಿಶ್ಲೇಷಣೆಯನ್ನು ಪ್ರಕಟಿಸಿದ್ದೇವೆ ಎಂದು ವಿಜಯಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಭಾರತದಲ್ಲಿ ಜನಿಸಿದ ಇವರು ಅಮೆರಿಕದ ಟೆಕ್ಸಾಸ್ನಲ್ಲಿ ಬೆಳೆದರು. ಇವರ ತಂದೆ ಗಲ್ಫ್ ಆಫ್ ಮೆಕ್ಸಿಕೊದಲ್ಲಿ ತೈಲ ಸಂಸ್ಕರಣ ಘಟಕಗಳಲ್ಲಿ ರಾಸಾಯನಿಕ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ನಂತರ ಇವರ ಕುಟುಂಬವು ಪೂರ್ವ ಕರಾವಳಿಗೆ ಸ್ಥಳಾಂತರಗೊಂಡಿತು. ನ್ಯೂಜೆರ್ಸಿಯಲ್ಲಿ ಪ್ರೌಢಶಾಲಾ ಶಿಕ್ಷಣವನ್ನು ಪಡೆದ ಇವರು, ಬಳಿಕ ಕಾರ್ನೆಲ್ ವಿಶ್ವವಿದ್ಯಾಲಯ ಮತ್ತು ನ್ಯೂಯಾರ್ಕ್ ಯೂನಿವರ್ಸಿಟಿ ಲಾ ಸ್ಕೂಲ್‌ನಲ್ಲಿ ವಿದ್ಯಾಭ್ಯಾಸ ಪಡೆದರು. 2011 ರಲ್ಲಿ ಸೋಷಿಯಲ್-ಮೀಡಿಯಾ ಕಂಪನಿಯ ಕಾನೂನು ಸಂಸ್ಥೆಯಲ್ಲಿ ಕೆಲಸ ಮಾಡಿದರು.
ಕಾರ್ಪೊರೇಟ್ ವಕೀಲರಾಗಿರುವ ಇವರು, ಸ್ವತಃ ನೀತಿಗಳನ್ನು ರೂಪಿಸುವ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಜಾಗತಿಕ ರಾಜಕಾರಣದಲ್ಲಿ ಟ್ವಿಟ್ಟರ್ ಪಾತ್ರ ಹೆಚ್ಚಾದಂತೆ ಗಡ್ಡೆಯವರು ಇದರ ಮೇಲುಸ್ತುವಾರಿ ವಹಿಸಿದರು.