ವಾರ್ಸಾ (ಪೋಲೆಂಡ್) : ರಷ್ಯಾದ ಆಕ್ರಮಣದಿಂದ ಪಲಾಯನ ಮಾಡುತ್ತಿರುವ ಸಾವಿರಾರು ಉಕ್ರೇನಿಯರಿಗೆ ಸಹಾಯ ಮಾಡಿರುವುದಕ್ಕೆ ಧನ್ಯವಾದ ಅರ್ಪಿಸಲು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಪೋಲೆಂಡ್ ಗೆ ಪ್ರವಾಸ ಬೆಳೆಸಿದ್ದಾರೆ.
ರಷ್ಯಾದ ಪಡೆಗಳನ್ನು ಹಿಮ್ಮೆಟ್ಟಿಸುವ ಭಾಗವಾಗಿ ನ್ಯಾಟೋ ಪಡೆಗಳಿಗೆ ಮಿಗ್ -29 ವಿಮಾನಗಳನ್ನು ಹಸ್ತಾಂತರ ಮಾಡುವ ಪ್ರಸ್ತಾಪವನ್ನು ಅಮೆರಿಕಕ್ಕೆ ಪೋಲೆಂಡ್ ಮಾಡಿತ್ತು. ಆದರೆ ಅಮೆರಿಕ ಈ ಪ್ರಸ್ತಾಪ ಈಗ ಕಾರ್ಯ ಸಾಧುವಲ್ಲ ಎಂದು ತಿರಸ್ಕರಿತ್ತು. ಆದರೆ, ಪೋಲೆಂಡ್ ಯೋಜನೆ ಬಗ್ಗೆ ಯೋಚಿಸುವುದಾಗಿ ಹೇಳಿತ್ತು. ಈ ಮಧ್ಯೆ ಅಮೆರಿಕದ ಉಪಾಧ್ಯಕ್ಷರ ಭೇಟಿ ಸಹ ಕುತೂಹಲ ಮೂಡಿಸಿದೆ.
ಉಕ್ರೇನ್‌ಗೆ ಪೋಲೆಂಡ್‌ನ ಸಂಪೂರ್ಣ ಬೆಂಬಲವಿದ್ದು, ಮತ್ತು ಉಕ್ರೇನ್‌ಗೆ ಯುದ್ಧ ವಿಮಾನಗಳನ್ನು ಲಭ್ಯವಾಗುವಂತೆ ಮಾಡುವ ನಿರ್ಧಾರವು ಯುಎಸ್ ಮತ್ತು ನ್ಯಾಟೋಗೆ ಬಿಟ್ಟಿದ್ದು, ಅದು ಕೂಡ ಎಲ್ಲಾ ರಾಷ್ಟ್ರಗಳು ಒಪ್ಪಿಗೆ ನೀಡಿದರೆ ಮಾತ್ರ ಎಂದು ಪೋಲೆಂಡ್‌ನ ಪ್ರಧಾನ ಮಂತ್ರಿ ಹೇಳಿದ್ದಾರೆ.
ಇತರ ದೇಶದ ಮೂಲಕ ಪೋಲೆಂಡ್ ಯುದ್ಧ ವಿಮಾನಗಳನ್ನು ಉಕ್ರೇನ್‌ಗೆ ನೀಡಲು ಪೋಲೆಂಡ್ ನಿರಾಕರಿಸಿದ್ದು, ರಷ್ಯಾದೊಂದಿಗೆ ನೇರವಾಗಿ ಯುದ್ಧದಲ್ಲಿ ಭಾಗಿಯಾಗದೇ ನ್ಯಾಟೋ ಮಿತ್ರರಾಷ್ಟ್ರಗಳ ಜೊತೆಗೆ ಇರುವುದಾಗಿ ಹೇಳಿದೆ. ಇನ್ನು ಕಮಲ ಹ್ಯಾರಿಸ್ ಅವರು ಪೋಲೆಂಡ್ ಮತ್ತು ರೊಮೇನಿಯಾಗೆ ಭೇಟಿ ನೀಡಲಿದ್ದು, ಹಲವು ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಈ ಫೈಟರ್ ಜೆಟ್ ಒಪ್ಪಂದವು ಗೊಂದಲಮಯವಾಗಿದೆ, ಈ ಬಗ್ಗೆ ಹ್ಯಾರಿಸ್ ಅಲ್ಲಿಗೆ ಹೋಗಿ ಮಾತುಕತೆ ನಡೆಸಿ ಸುಗಮಗೊಳಿಸಬೇಕಾಗುತ್ತದೆ" ಎಂದು ಅಮೆರಿಕದ ಹಿಂದಿನ ಅಧ್ಯಕ್ಷ ಬಿಲ್ ಕ್ಲಿಂಟನ್‌ಗೆ ಪೋಲೆಂಡ್‌ಗೆ ಯುಎಸ್ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದ, ಹಿರಿಯ ಸಲಹೆಗಾರರಾಗಿದ್ದ ಡೇನಿಯಲ್ ಫ್ರೈಡ್ ಹೇಳಿದ್ದಾರೆ.
ಕಮಲಾ ಹ್ಯಾರಿಸ್ ಅವರ ಭೇಟಿ ಯಾವುದೇ ಯುಧ್ದ ವಿಮಾನದ ಒಪ್ಪಂದದ ಕುರಿತಾಗಿ ಅಲ್ಲ, ಯುದ್ಧ ವಿಮಾನದ ಒಪ್ಪಂದಗಳನ್ನು ಸೇನಾ ಮುಖ್ಯಸ್ಥರು ಸಮ್ಮುಖದಲ್ಲಿ ನಡೆಸಲಾಗುವುದು, ಬದಲಾಗಿ ಪೋಲೆಂಡ್ ಪ್ರಧಾನಿ ಜೊತೆಗೆ ಮತ್ತು ಉಕ್ರೇನಿನಿಂದ ಪೋಲೆಂಡ್‌ಗೆ ಪಲಾಯನ ಮಾಡಿದ ಉಕ್ರೇನಿಗರ ಜೊತೆ ಮಾತುಕತೆ ನಡೆಸಲು ಈ ಪ್ರವಾಸ ಕೈಗೊಂಡಿರುವುದಾಗಿ ಅಮೆರಿಕದ ಶ್ವೇತಭವನದ ಕಾರ್ಯದರ್ಶಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಂತರ ಕಮಲಾ ಹ್ಯಾರಿಸ್ ರೊಮೇನಿಯಾದ ಅಧ್ಯಕ್ಷರನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ. ಈ ಮೂಲಕ ನ್ಯಾಟೋ ರಾಷ್ಟ್ರಗಳ ಮೂಲಕ ಎಲ್ಲ ಮಿತ್ರ ರಾಷ್ಟ್ರಗಳಲ್ಲಿ ಸಮನ್ವಯ ಮೂಡಿಸಿ ಉಕ್ರೇನ್ ಗೆ ಬೆಂಬಲವಾಗಿ ನಿಲ್ಲುವಂತೆ ಮಾಡುವುದಾಗಿ ತಿಳಿದು ಬಂದಿದೆ.
ಓದಿ : ಗೋಧಿ, ಓಟ್ಸ್ ಸೇರಿ ಆಹಾರ ಪದಾರ್ಥಗಳ ಮೇಲಿನ ರಫ್ತು ನಿಲ್ಲಿಸಿದ ಉಕ್ರೇನ್!