ವಾಶಿಂಗ್ಟನ್: ಕೋವಿಡ್ ಮಾತ್ರವಲ್ಲದೆ ಭವಿಷ್ಯದಲ್ಲಿ ಜಗತ್ತನ್ನು ಕಾಡಬಹುದಾದ ಯಾವುದೇ ಮಾರಕ ವೈರಸ್ಗಳನ್ನು ತಡೆಯಬಲ್ಲ ಜಾಗತಿ ಲಸಿಕೆ (Universal Vaccine) ಯನ್ನು ವಿಜ್ಞಾನಿಗಳು ಅಭಿವೃದ್ದಿಪಡಿಸಿದ್ದಾರೆ.
ಭವಿಷ್ಯದಲ್ಲಿ ಯಾವ ವೈರಸ್ಗಳು ಮಾನವ ಕುಲವನ್ನು ಸಂಕಷ್ಟಕ್ಕೆ ಸಿಲುಕಿಸಬಹುದು ಎಂಬುವುದು ಯಾರಿಗೂ ಗೊತ್ತಿಲ್ಲ. ಯಾವ ಸಂದರ್ಭದಲ್ಲಿ ಯಾವ ಮಾರಕ ವೈರಸ್ಗಳು ಬೇಕಾದರೂ ಮನುಷ್ಯರನ್ನು ಆವರಿಸಿಕೊಳ್ಳಬಹುದು. ಅಂತಹ ಸಂದಿಗ್ಧ ಪರಿಸ್ಥಿತಿಗಳು ಎದುರಾದರೆ ತಕ್ಷಣದ ಪರಿಹಾರವಾಗಿ ಯುಎಸ್ನ ನಾರ್ತ್ ಕ್ಯಾರೋಲೀನಾ ವಿಶ್ವವಿದ್ಯಾಲಯ (University of North Carolina-UNC) ದ ತಜ್ಞರ ತಂಡ ಲಸಿಕೆ ಅಭಿವೃದ್ದಿಪಡಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
2003 ರಲ್ಲಿ SARS ವೈರಸ್ ಪತ್ತೆಯಾದ ಬಳಿಕ, 2019 ರಲ್ಲಿ ಕೋವಿಡ್ ವೈರಸ್ ಕಾಣಿಸಿಕೊಂಡು ಜಗತ್ತನ್ನು ಕಾಡುತ್ತಿದೆ. ಹಾಗಾಗಿ, ವಿಜ್ಞಾನಿಗಳು ಪ್ರಸ್ತುತ ಇರುವ ಕೋವಿಡ್ ವೈರಸ್ ಮತ್ತು ಮುಂದೆ ಪ್ರಾಣಿಗಳಿಂದ ಮನುಷ್ಯರಿಗೆ ಆವರಿಸಿಕೊಳ್ಳಬಹುದಾದ ವೈರಸ್ಗಳನ್ನು ತಡೆಯುವ ಲಸಿಕೆ ಕಂಡು ಹಿಡಿದಿದ್ದಾರೆ ಎನ್ನಲಾಗಿದೆ.
ಈ ಜಾಗತಿಕ ಲಸಿಕೆಯನ್ನು 'ಸೂಪರ್ ಲಸಿಕೆ' ಎಂದು ಕೂಡ ಹೆಸರಿಸಲಾಗಿದೆ. ಈಗಾಗಲೇ ಇಲಿಗಳ ಮೇಲೆ ಲಸಿಕೆ ಪ್ರಯೋಗ ಮಾಡಿ ಅದರ ಪರಿಣಾಮಕತ್ವನ್ನು ಪರೀಕ್ಷಿಸಲಾಗಿದೆ. ಇದು ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾದ ಬಿ.1.351 ಕೋವಿಡ್ ರೂಪಾಂತರಿಯ ವಿರುದ್ಧ ಪರಿಣಾಮಕಾರಿಯಾಗಿದೆ ಎಂಬುವುದು ರುಜುವಾತಾಗಿದೆ. ಮುಂದಿನ ವರ್ಷ ಮಾನವನ ಮೇಲೆ ಈ ಲಸಿಕೆ ಪ್ರಯೋಗ ಮಾಡಲು ವಿಜ್ಞಾನಿಗಳು ಯೋಜನೆ ರೂಪಿಸಿದ್ದಾರೆ ಎಂದು ತಿಳಿದು ಬಂದಿದೆ.
ಕೋವಿಡ್ -19 ಬಳಿಕ ರೂಪಾಂತರಿ ಡೆಲ್ಟಾ ಮತ್ತು ಡೆಲ್ಟಾ + ಜಗತ್ತನ್ನು ಆವರಿಸಿಕೊಳ್ಳುತ್ತಿರುವುದು ಅಮೆರಿಕದಂತಹ ಮುಂದುವರೆದ ರಾಷ್ಟ್ರಗಳನ್ನು ಆತಂಕಕ್ಕೆ ದೂಡಿದೆ. ಈ ಸಮಯದಲ್ಲಿ ವಿಜ್ಞಾನಗಳು ಜಾಗತಿಕ ಲಸಿಕೆಯ ಬಗ್ಗೆ ಶುಭ ಸುದ್ದಿ ಕೊಟ್ಟಿದ್ದಾರೆ.
ಇದನ್ನೂ ಓದಿ: ಚೀನಾ ಸರಕುಗಳಂತೆ ಅಲ್ಲಿನ ಲಸಿಕೆಯೂ ಕಳಪೆ: ಹಲವು ದೇಶಗಳಲ್ಲಿ ಕೋವಿಡ್ ಉಲ್ಬಣ