ವಾಷಿಂಗ್ಟನ್: ಕೊರೊನಾ ಹಾವಳಿಗೆ ಅಮೆರಿಕಾ ಬೆಚ್ಚಿಬಿದ್ದಿದ್ದರೂ ಕೂಡ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತ್ರ ಸಾರ್ವಜನಿಕವಾಗಿ ಮಾಸ್ಕ್ ಧರಿಸಲು ನಿರಾಕರಿಸುತ್ತಿದ್ದರು. ಆದರೆ ಇದೀಗ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾಸ್ಕ್ ಧರಿಸಿ ಗಮನ ಸೆಳೆದಿದ್ದಾರೆ.
ಶನಿವಾರ ಮಿಲಿಟರಿ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಟ್ರಂಪ್ ಆರೋಗ್ಯ ಅಧಿಕಾರಿಗಳು ಶಿಫಾರಸು ಮಾಡಿದ ಹಾಗೂ ಅಧ್ಯಕ್ಷೀಯ ಮುದ್ರೆ ಇರುವ ಮುಖಗವಸು ಧರಿಸಿದ್ದಾರೆ.
ವಾಷಿಂಗ್ಟನ್ನಲ್ಲಿರುವ ವಾಲ್ಟರ್ ರೀಡ್ ಮಿಲಿಟರಿ ಆಸ್ಪತ್ರೆಗೆ ಭೇಟಿ ನೀಡಿದ ಅವರು, ಕೋವಿಡ್ ರೋಗಿಗಳು, ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ಸಿಬ್ಬಂದಿ ಜೊತೆ ಮಾತನಾಡಿದರು. ಆಸ್ಪತ್ರೆಗೆ ಭೇಟಿ ನೀಡಲೆಂದು ಶ್ವೇತಭವನದಿಂದ ಹೊರಟ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ್ದ ಟ್ರಂಪ್, "ನೀವು ಆಸ್ಪತ್ರೆಯಲ್ಲಿರುವ ವೇಳೆ ಮಾಸ್ಕ್ ಧರಿಸುವುದು ದೊಡ್ಡ ವಿಷಯ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದ್ದಾರೆ.

ದೇಶದಲ್ಲಿ ಕೊರೊನಾ 3.2 ಮಿಲಿಯನ್ ಜನರಿಗೆ ಅಂಟಿದ್ದು, 1,36,652 ಮಂದಿ ಬಲಿಯಾಗಿದ್ದಾರೆ. ಹೀಗಿದ್ದರೂ ಟ್ರಂಪ್ ಮಾತ್ರ ಸುದ್ದಿಗೋಷ್ಠಿಗಳು, ರ‍್ಯಾಲಿಗಳು ಸೇರಿದಂತೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮಾಸ್ಕ್ ಧರಿಸಲು ನಿರಾಕರಿಸುತ್ತಿದ್ದರು. ವೈದ್ಯಕೀಯ ತಜ್ಞರ ಸಲಹೆಗಳನ್ನು ಬದಿಗೊತ್ತಿದ್ದರು.