ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇನ್ನೂ ತಮ್ಮ ಸೋಲನ್ನು ಅರಗಿಸಿಕೊಳ್ಳೋಕೆ ಆಗುತ್ತಿಲ್ಲ. ಅಧ್ಯಕ್ಷೀಯ ಚುನಾವಣಾ ಫಲಿತಾಂಶ ಬಂದಾಗಿನಿಂದಲೂ ಫಲಿತಾಂಶವನ್ನು ನಿರಾಕರಿಸುತ್ತಿರುವ ಟ್ರಂಪ್, ಇದೀಗ ಬೃಹತ್ ಪ್ರತಿಭಟನೆ ಮೂಲಕ ತಮ್ಮ ಆಕ್ರೋಶ ಹೊರ ಹಾಕಲು ಮುಂದಾಗಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಅವರು, ಜನವರಿ 6ರಂದು ಯುಎಸ್ ರಾಜಧಾನಿ ವಾಷಿಂಗ್ಟನ್‌ನಲ್ಲಿ ತಮ್ಮ ಬೆಂಬಲಿಗರು ಬೃಹತ್ ರ್ಯಾಲಿ ನಡೆಸುತ್ತಾರೆ ಎಂದು ಹೇಳಿದ್ದಾರೆ.
ವಾಷಿಂಗ್ಟನ್‌ನಲ್ಲಿ ಬೃಹತ್ ರ್ಯಾಲಿ ನಡೆಯಲಿದೆ. ಡಿ.ಸಿ.ಯಲ್ಲೂ ಜನವರಿ 6ರ ಬೆಳಗ್ಗೆ 11 ಗಂಟೆಗೆ ಪ್ರತಿಭಟನೆ ನಡೆಸುತ್ತಿದ್ದಾರೆ. 'ಸ್ಟಾಪ್ ದಿ ಸ್ಟೀಲ್' ಎಂದು ಟ್ರಂಪ್ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಮತ್ತೊಂದು ಟ್ವೀಟ್ ಮಾಡಿರುವ ಅವರು, 6ರಂದು ಅತಿ ದೊಡ್ಡ ಪುರಾವೆಯನ್ನು ಒದಗಿಸುತ್ತೇನೆ. ದೊಡ್ಡ ಮಟ್ಟದಲ್ಲಿ ನಾವು ಗೆಲ್ಲುತ್ತೇವೆ ಎಂದಿದ್ದಾರೆ. ವುಮೆನ್ ಫಾರ್ ಅಮೆರಿಕ ಫಸ್ಟ್ ಎಂಬ ಸಂಸ್ಥೆ ರ್ಯಾಲಿಯ ನೇತೃತ್ವ ವಹಿಸಿದ್ದು, 2020ರ ಚುನಾವಣೆಯ ಸಮಗ್ರತೆಗಾಗಿ ಅಮೆರಿಕನ್ನರು ರ್ಯಾಲಿಯಲ್ಲಿ ಭಾಗವಹಿಸಿ ಎಂದು ಕರೆ ನೀಡಿದೆ.
ಡೆಮಾಕ್ರಟಿಕ್ ಪಕ್ಷದವರು ರಿಪಬ್ಲಿಕನ್ ಸದಸ್ಯರ ಮತಗಳನ್ನು (ಶೂನ್ಯ) ಇಲ್ಲವಾಗಿಸಿದ್ದಾರೆ. ಅಧ್ಯಕ್ಷ ಟ್ರಂಪ್ ಅವರೊಂದಿಗೆ ಸೇರಿ ಅಮೆರಿಕದ ಜನರು ಇದನ್ನು ನಿಲ್ಲಿಸಬೇಕು. ದೇಶದ ಒಳತಿಗಾಗಿ ಚುನಾವಣೆಯ ಸಮಗ್ರತೆಗಾಗಿ ಅಧ್ಯಕ್ಷರು ಕೈಗೊಳ್ಳುವ ನಿರ್ಧಾರಕ್ಕೆ ಬದ್ಧ. ವಾಷಿಂಗ್ಟನ್, ಡಿ.ಸಿ.ಯಲ್ಲಿ ಜನವರಿ 6ರಂದು ನಡೆಯುವ ಪ್ರತಿಭಟನೆಯಲ್ಲಿ ಭಾಗವಹಿಸಿ ಎಂದು ಸಂಸ್ಥೆ ಕರೆ ನೀಡಿದೆ.