ವಾಷಿಂಗ್ಟನ್ (ಅಮೆರಿಕ) : ಕ್ಯಾಪಿಟಲ್ ಮೇಲಿನ ದಾಳಿಗೆ ಸಂಬಂಧಿಸಿದಂತೆ ಅಧ್ಯಕ್ಷ ಟ್ರಂಪ್ ವಿರುದ್ಧ ಪ್ರತಿನಿಧಿ ಸಭೆ ದೋಷಾರೋಪಣೆ ಪಟ್ಟಿ ಸಲ್ಲಿಸಲು ನಿರ್ಧರಿಸಿದೆ. ಆದರೂ, ಡೊನಾಲ್ಡ್ ಟ್ರಂಪ್ ರಾಜೀನಾಮೆ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗ್ತಿದೆ.
ರಾಜೀನಾಮೆ ಎಂದರೆ ವೈಫಲ್ಯವನ್ನು ಒಪ್ಪಿಕೊಳ್ಳುವುದು. ಹಾಗಾಗಿ ಟ್ರಂಪ್ ರಾಜೀನಾಮೆ ನೀಡಲು ಮುಂದಾಗುತ್ತಿಲ್ಲ ಎಂದು ಶ್ವೇತಭವನದ ಹಿರಿಯ ಸಲಹೆಗಾರರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೆ ಅಮೆರಿಕದ ಸೆನೆಟ್ಗೆ ಅವರನ್ನು ಶಿಕ್ಷಿಸಲು ಸಾಕಷ್ಟು ಸಮಯವಿಲ್ಲ ಎಂದೂ ತಿಳಿಸಿದ್ದಾರೆ.
ಜನವರಿ 20 ರಂದು 46 ನೇ ಅಧ್ಯಕ್ಷರಾಗಿ ಜೋ ಬೈಡನ್ ಅಧಿಕಾರ ಸ್ವೀಕರಿಸಲಿದ್ದಾರೆ. ಅದಕ್ಕೂ ಒಂದು ದಿನ ಮುಂಚಿತವಾಗಿ ಟ್ರಂಪ್ ಫ್ಲೊರಿಡಾದ ತಮ್ಮ ಗೆಸ್ಟ್ಹೌಸ್ಗೆ ಹೋಗುವ ನಿರೀಕ್ಷೆಯಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ :ಡೊನಾಲ್ಡ್ ಟ್ರಂಪ್ ಚಾನಲ್ನಿಂದ ವಿಡಿಯೋ ತೆಗೆದ ಯೂಟ್ಯೂಬ್: ಒಂದು ವಾರ ಖಾತೆ ಅಮಾನತು
ಅಧ್ಯಕ್ಷೀಯ ಚುನಾವಣೆಯ ಟ್ರಂಪ್ ಸೋಲನ್ನು ಒಪ್ಪಿಕೊಳ್ಳದ ಬೆಂಬಲಿಗರು, ಕ್ಯಾಪಿಟಲ್ ಕಟ್ಟಡಕ್ಕೆ ನುಗ್ಗಿ ಅಪಾರ ಪ್ರಮಾಣದ ಆಸ್ತಿ ಪಾಸ್ತಿ ಹಾನಿ ಮಾಡಿದರು. ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದು, ಹಲವರ ಸ್ಥಿತಿ ಗಂಭೀರವಾಗಿತ್ತು. ಅಲ್ಲದೆ, ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದಿಂದಾಗಿ ಟ್ರಂಪ್ ಟ್ವಿಟ್ಟರ್ ಖಾತೆಯನ್ನೂ ರದ್ದುಗೊಳಿಸಲಾಗಿದೆ.