ಅಲಬಾಮಾ: ಅಮೆರಿಕದ ಅಲಬಾಮಾ ರಾಜ್ಯದಲ್ಲಿ ಮರಗಳನ್ನು ಧರೆಗುರುಳಿಸಿ, ಮನೆಗಳನ್ನು ನೆಲಸಮಗೊಳಿಸಿದ ಸುಂಟರಗಾಳಿಯು ನಿನ್ನೆ ಐವರನ್ನ ಬಲಿ ಪಡೆದಿದ್ದು, ಹಲವರು ಗಾಯಗೊಂಡಿದ್ದಾರೆ. ಟೆಕ್ಸಾಸ್ ರಾಜ್ಯದಲ್ಲಿ ಫೆಬ್ರವರಿ ತಿಂಗಳಿನಿಂದ ಚಳಿಗಾಲದ ಸುಂಟರಗಾಳಿ ಅಬ್ಬರಿಸುತ್ತಿದ್ದು, ಇಲ್ಲಿಯವರೆಗೆ 111 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ನಿನ್ನೆ ಬೀಸಿದ ಭಯಾನಕ ಸುಂಟರಗಾಳಿ ಇಡೀ ಅಲಬಾಮಾ ರಾಜ್ಯವನ್ನೇ ಅಲ್ಲೋಲ - ಕಲ್ಲೋಲಗೊಳಿಸಿದೆ. ಪೂರ್ವ ಅಲಬಾಮಾದ ಕ್ಯಾಲ್ಹೌನ್ ಕೌಂಟಿ ಪ್ರದೇಶದಲ್ಲೇ ಎಲ್ಲಾ ಸಾವುಗಳು ವರದಿಯಾಗಿದೆ. ಸಾವಿರಾರು ಜನರು ಮನೆ-ಮಠಗಳನ್ನು ಕಳೆದುಕೊಂಡಿದ್ದು, ಹಲವು ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ. ಅವಶೇಷಗಳಡಿ ಕೆಲವರು ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.
ಇದನ್ನೂ ಓದಿ: ಅಫ್ಘಾನ್ನಿಂದ ಅಮೆರಿಕ ಸೈನ್ಯ ಹಿಂಪಡೆಯುವ ನೀತಿ ತಿರಸ್ಕರಿಸಿದ ಬೈಡನ್
ಇದು ಇಷ್ಟಕ್ಕೆ ನಿಂತಿಲ್ಲ, ಮತ್ತೊಂದು ಬಾರಿ ಸುಂಟರಗಾಳಿ ಬೀಸುವ ಹಾಗೂ ಪ್ರವಾಹ ಉಂಟಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹೀಗಾಗಿ ಅಲಬಾಮಾದ 46 ಪ್ರದೇಶಗಳಲ್ಲಿ ಗವರ್ನರ್ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ.
ಟೆಕ್ಸಾಸ್, ಅಲಬಾಮಾ, ಅರ್ಕಾನ್ಸಾಸ್, ಟೆನ್ನೆಸ್ಸೀ, ಕೆಂಟುಕಿ ಸೇರಿದಂತೆ ದಕ್ಷಿಣ ಅಮೆರಿಕದ ಕೆಲ ರಾಜ್ಯಗಳಲ್ಲಿ ಸುಂಟರಗಾಳಿಯ ಸುಳಿಯಲ್ಲಿ ಸಿಲುಕಿದ್ದು, ಅನೇಕರು ಮೃತಪಟ್ಟಿದ್ದಾರೆ.