ವಾಷಿಂಗ್ಟನ್ : ಕೊರೊನಾ ವೈರಸ್ ಹರಡಲು ಧೂಮಪಾನವೂ ಕಾರಣವಾಗಬಹುದು ಎಂಬ ಆತಂಕಕಾರಿ ಅಂಶವನ್ನು ಅಧ್ಯಯನವೊಂದು ಹೇಳಿದೆ.
ಅಮೆರಿಕದ ದಕ್ಷಿಣ ಕರೊಲಿನಾ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದಲ್ಲಿ ಧೂಮಪಾನದಿಂದಲೂ ಕೊರೊನಾ ಸೋಂಕು ತಗಲುವ ಸಾಧ್ಯತೆ ಇದೆ ಎಂಬ ಅಂಶ ಬೆಳಕಿಗೆ ಬಂದಿದೆ. ಧೂಮಪಾನ ಮಾಡುವಾಗ ಹೊಗೆಯೊಂದಿಗೆ ಕೊರೊನಾ ಸೋಂಕು ವೇಗವಾಗಿ ಶ್ವಾಸಕೋಶ ಪ್ರವೇಶಿಸಲಿದೆ. ಅಲ್ಲದೆ, ಹೊಗೆ ಹೊರ ಬಿಡುವಾಗ ಪಕ್ಕದಲ್ಲಿದ್ದವರಿಗೂ ಸೋಂಕು ತಗಲುವ ಸಾಧ್ಯತೆ ಇದೆ. ಹೀಗಾಗಿ ಧೂಮಪಾನ ತುಂಬಾ ಅಪಾಯ ಎಂದು ಅಧ್ಯಯನದಲ್ಲಿ ಉಲ್ಲೇಖಿಸಿದೆ.
ಪ್ರಸ್ತುತ ಧೂಮಪಾನಿಗಳು, ಧೂಮಪಾನ ಬಿಟ್ಟವರು ಹಾಗೂ ಧೂಮಪಾನ ಮಾಡದವರ ವಿವಿಧ ರೀತಿಯ ಶ್ವಾಸಕೋಶ ಅಂಗಾಂಶಗಳನ್ನು ಆರ್ಎನ್ಎ (ರೈಬೊ ನ್ಯೂಕ್ಲಿಯಿಕ್ ಆ್ಯಸಿಡ್/ಆಮ್ಲ) ಪರೀಕ್ಷೆಗೆ ಒಳಪಡಿಸಿದಾಗ ಈ ಅಂಶ ಗೊತ್ತಾಗಿದೆ.
ಅಮೆರಿಕದ 'ರೆಸ್ಪಿರೇಟರಿ ಅಂಡ್ ಕ್ರಿಟಿಕಲ್ ಕೇರ್ ಮೆಡಿಸಿನ್' ಪತ್ರಿಕೆಯಲ್ಲಿ ಸಂಶೋಧಕರು ನಡೆಸಿದ ಅಧ್ಯಯನದ ವರದಿ ಪ್ರಕಟವಾಗಿದೆ. ಮಾನವನ ಜೀವಕೋಶಗಳಿಗೆ ಕೊರೊನಾ ವೈರಸ್, ಸಾರ್ಸ್ ಕೋವಿಡ್-2 ಸೋಂಕು ಅಂಟಲು ಆಂಜಿಯೋಟೆನ್ಸಿನ್ ಪರಿವರ್ತಿಸುವ ಕಿಣ್ವ (ಎಸಿಇ) ಮತ್ತು ಉಸಿರಾಡುವ ಪ್ರದೇಶ ಮುಖ್ಯ. ಸೋಂಕಿತರು ಧೂಮಪಾನ ಮಾಡಿದರೆ ಎಫ್ಯುಆರ್ಐಎನ್ ಮತ್ತು ಟಿಎಂಪಿಆರ್ಎಸ್ಎಸ್ ಕಿಣ್ವಗಳು ಸುಲಭವಾಗಿ ಮಾನವನ ದೇಹಕ್ಕೆ ಸೋಂಕು ಹೊಕ್ಕಲು ಸಹಾಯ ಮಾಡುತ್ತವೆ.
ಸಂಶೋಧನೆ ಪ್ರಕಾರ, ಸದಾ ಧೂಮಪಾನ ಮಾಡುವವರಲ್ಲಿ ಶ್ವಾಸಕೋಶ ಅಂಗಾಂಶಗಳಲ್ಲಿ ಆಂಜಿಯೋಟೆನ್ಸಿನ್ ಪರಿವರ್ತಿಸುವ ಕಿಣ್ವ (ಎಸಿಇ) ಶೇ.25 ರಷ್ಟು ಹೆಚ್ಚಿರುತ್ತದೆ (ಜೀವನದಲ್ಲಿ 100 ಸಿಗರೇಟ್ ಸೇದಿದವರನ್ನು ಧೂಮಪಾನ ಮಾಡದವರಿಗೆ ಹೋಲಿಸಿದಾಗ).
ಅಧ್ಯಯನದಲ್ಲಿ ಗುರುತಿಸಲಾದ ಆಂಜಿಯೋಟೆನ್ಸಿನ್ ಪರಿವರ್ತಿಸುವ ಕಿಣ್ವ ಮತ್ತು ಶ್ವಾಸಕೋಶದ ಮೇಲೆ ಪರಿಣಾಮ ಬೀರುವ ಧೂಮಪಾನ ಕೋವಿಡ್-19 ವೈರಸ್ ಪ್ರವೇಶ ಬಿಂದುಗಳ ಹೆಚ್ಚಳಕ್ಕೂ ಸಹಾಯವಾಗುತ್ತದೆ. ಅದಾದ ಬಳಿಕ ಶ್ವಾಸಕೋಶದಲ್ಲೇ ವೈರಸ್ ಬಂಧಿಯಾಗುತ್ತದೆ. ಆಗ ಅದು ಹೆಚ್ಚಿನ ಅಪಾಯವನ್ನು ಸೂಚಿಸುತ್ತದೆ. ಸಿಗರೇಟ್ ಸೇವನೆ ಹೆಚ್ಚಾಗಿದೆಯೋ ಅಲ್ಲಿ ಕೊರೊನಾ ಸೋಂಕಿನ ಫಲಿತಾಂಶ ಕೆಟ್ಟಮಟ್ಟದಲ್ಲಿದೆ. ಅದಕ್ಕೆ ಉದಾಹರಣೆ ಆ ಪ್ರದೇಶದಲ್ಲಿ ಹೆಚ್ಚಾದ ಪ್ರಕರಣಗಳೇ ಕಾರಣ ಎಂದು ಅಧ್ಯಯನದ ಸಹ ಲೇಖಕ ಕ್ರಿಸ್ಟೋಪರ್ ಅಮೋಸ್ ಹೇಳಿದ್ದಾರೆ.
ಧೂಮಪಾನದಿಂದಾಗಿ ಶ್ವಾಸಕೋಶದಲ್ಲಿ ಎಸಿಇ-2 ಅಭಿವ್ಯಕ್ತಿ ಹೆಚ್ಚಾಗುವ ಕಾರ್ಯವಿಧಾನದ ಕುರಿತು ಪತ್ತೆ ಹಚ್ಚಲು ಹೆಚ್ಚಿನ ಅಧ್ಯಯನಗಳು ಅಗತ್ಯ. ನಿಯಂತ್ರಣಕ್ಕೆ ಕಾರ್ಯವಿಧಾನಗಳು, ಪರಿಣಾಮಗಳು ತಿಳಿದಿಲ್ಲ. ಅದಕ್ಕೆ ಹೆಚ್ಚಿನ ತಂತ್ರಜ್ಞಾನದ ಅಧ್ಯಯನ ನಡೆಸಬೇಕಾಗಿದೆ ಎಂದು ತಿಳಿಸಿದ್ದಾರೆ.