ಮಿನ್ನಿಯಾಪೋಲಿಸ್(ಯುಎಸ್ಎ): ಪೊಲೀಸರಿಂದ ಜಾರ್ಜ್ ಫ್ಲಾಯ್ಡ್ ಮತ್ತು ಕಪ್ಪು ಪುರುಷರ ಹತ್ಯೆಯನ್ನು ವಿರೋಧಿಸಿ ಅಮೆರಿಕದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ದೇಶಾದ್ಯಂತ ಉದ್ರಿಕ್ತರಿಂದ ಪ್ರತಿಭಟನೆ ಭುಗಿಲೆದ್ದಿದ್ದು, ಶನಿವಾರ ನ್ಯೂಯಾರ್ಕ್ನಿಂದ ತುಲ್ಸಾ ಹಾಗೂ ಲಾಸ್ ಏಂಜಲೀಸ್ವರೆಗೆ ಪ್ರತಿಭಟನೆ ಕಾವು ಬೆಳೆದಿದೆ. ಈ ವೇಳೆ ಪ್ರತಿಭಟನಾಕಾರರು ಪೊಲೀಸ್ ಕಾರುಗಳಿಗೆ ಬೆಂಕಿ ಹಚ್ಚಿದ್ದಾರೆ. ಲಾಕ್ಡೌನ್ ನಡುವೆಯೂ ಅಶಾಂತಿ ವಾತಾವರಣ ನಿರ್ಮಾಣವಾಗಿದ್ದು, ದೇಶದ ಹಲವೆಡೆ ಹಲವರಿಗೆ ಗಾಯಗಳಾದ ಪ್ರಕರಣ ವರದಿಯಾಗಿದೆ.
ಕಪ್ಪು ವ್ಯಕ್ತಿ ಫ್ಲಾಯ್ಡ್‌ನ ಕುತ್ತಿಗೆಯನ್ನು ಪೊಲೀಸ್ ಅಧಿಕಾರಿ ಎಂಟು ನಿಮಿಷಗಳಿಗಿಂತ ಹೆಚ್ಚು ಕಾಲ ಮೊಣಕಾಲಿನಿಂದ ಒತ್ತಿದ್ದರಿಂದ ಜಾರ್ಜ್ ಫ್ಲಾಯ್ಡ್ ಎಂಬಾತ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆ ಮಿನ್ನಿಯಾಪೋಲಿಸ್‌ನಲ್ಲಿ ಪ್ರಾರಂಭವಾದ ಪ್ರತಿಭಟನೆಗಳಲ್ಲಿ ನಗರದ ಹಲವೆಡೆಗಳಲ್ಲಿ ಹಾನಿಯಾಗಿದೆ. ಹಲವು ಕಟ್ಟಡಗಳಿಗೆ ಉದ್ರಿಕ್ತರು ಬೆಂಕಿ ಹಚ್ಚಿದೆ, ಕಿಟಕಿಗಳನ್ನು ಒಡೆದು ಹಾಕಿದ್ದಾರೆ. ಪೊಲೀಸರಿಂದಲೇ ವ್ಯಕ್ತಿಯೋರ್ವ ಸಾವನ್ನಪ್ಪಿರುವುದು ಪ್ರಮುಖ ರಾಷ್ಟ್ರೀಯ ವಿದ್ಯಮಾನವಾಗಿ ಮಾರ್ಪಟ್ಟಿದೆ.
ಈ ಪ್ರತಿಭಟನೆಗೆ ದೇಶದೆಲ್ಲೆಡೆ ವಿರೋಧಗಳು ವ್ಯಕ್ತವಾಗುತ್ತಿದ್ದು, ಕೊರೊನಾ ಭೀತಿಯ ನಡುವೆಯೂ ಉಗ್ರ ರೂಪದ ಪ್ರತಿಭಟನೆಗೆ ಜನ ಮುಂದಾಗಿದ್ದಾರೆ.
ಪ್ರತಿಭಟನೆ ನಿಮಿತ್ತ ಹೆಚ್ಚಿನ ಜನಸಮೂಹ ರಸ್ತೆಗಿಳಿದಿದ್ದು, ಮಾಸ್ಕ್ ಧರಿಸದೆ, ಸಾಮಾಜಿಕ ಅಂತರವನ್ನು ಕಾಪಾಡದೆ ಪ್ರತಿಭಟನೆ ನಡೆಸಲಾಗುತ್ತಿದೆ. ಈಗಾಗಲೇ ಕೊರೊನಾ ಪ್ರಕರಣ ಹೆಚ್ಚಿರುವ ರಾಷ್ಟ್ರದಲ್ಲಿ ಸಾಂಕ್ರಾಮಿಕ ರೋಗವನ್ನು ಮತ್ತಷ್ಟು ಹರಡುವ ಆತಂಕವನ್ನು ಆರೋಗ್ಯ ತಜ್ಞರು ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ ಮಿನ್ನೇಸೋಟ ರಾಜ್ಯದ ಗವರ್ನರ್ ಟಿಮ್ ವಾಲ್ಜ್ ಅವರು ರಾಜ್ಯದ ಭದ್ರಾತಾ ಸಿಬ್ಬಂದಿಯನ್ನು ಸಂಪೂರ್ಣವಾಗಿ ಸಜ್ಜುಗೊಳಿಸಿದ್ದು, ಅಶಾಂತಿಯನ್ನು ಹತ್ತಿಕ್ಕಲು ಎಲ್ಲಾ ರೀತಿಯ ಸಿದ್ಧತೆ ಮಾಡಿದ್ದಾರೆ.