ವಾಷಿಂಗ್ಟನ್(ಅಮೆರಿಕ): ಕಾಬೂಲ್ ಅನ್ನು ವಶಕ್ಕೆ ಪಡೆದ ನಂತರ ಅಲ್ಲಿಂದ ಅಮೆರಿಕನ್ನರು ಮತ್ತು ಬೇರೆ ದೇಶದ ಜನರು ಅವರವರ ದೇಶಗಳಿಗೆ ತೆರಳುವ ವಿಚಾರದಲ್ಲಿ ತಾಲಿಬಾನಿಗಳು ವ್ಯವಹಾರಿಕತೆ ಮತ್ತು ವೃತ್ತಿಪರತೆಯನ್ನು ಪ್ರದರ್ಶಿಸಿದ್ದಾರೆ ಎಂದು ಅಮೆರಿಕದ ಶ್ವೇತ ಭವನ ಹೇಳಿದೆ.
ಗುರುವಾರ ಕಾಬೂಲ್ನಿಂದ ದೋಹಾಕ್ಕೆ ಕತಾರ್ ಏರ್ವೇಸ್ ಚಾರ್ಟರ್ ವಿಮಾನ ಬಂದಿಳಿದ ಬಳಿ ಶ್ವೇತ ಭವನ ಈ ರೀತಿಯಾಗಿ ಹೇಳಿದೆ. ಎಚ್‌ಕೆಐಎ (HKIA-Hamid Karzai International Airport) ವಿಮಾನ ನಿಲ್ದಾಣದಿಂದ ಚಾರ್ಟರ್ ವಿಮಾನಗಳಲ್ಲಿ ಅಮೆರಿಕದ ನಾಗರಿಕರು ಮತ್ತು ಕಾನೂನು ಬದ್ಧ ಖಾಯಂ ನಿವಾಸಿಗಳು ವಾಪಸಾಗಲು ತಾಲಿಬಾನ್ ಸಹಕರಿಸಿದೆ ಎಂದು ಶ್ವೇತ ಭವನ ಹೇಳಿಕೊಂಡಿದೆ.
ತಾಲಿಬಾನಿಗಳು ಈ ವಿಚಾರದಲ್ಲಿ ವೃತ್ತಿಪರತೆಯನ್ನು ಮತ್ತು ವ್ಯವಹಾರಿಕತೆ ತೋರಿಸಿದ್ದಾರೆ. ಇದು ಅಫ್ಘಾನಿಸ್ತಾನ ಸರ್ಕಾರಕ್ಕೊಂದು ಸಕಾರಾತ್ಮಕ ಹೆಜ್ಜೆಯಾಗಿದೆ ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರರಾದ ಎಮಿಲಿ ಹಾರ್ನೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾಬೂಲ್ನಲ್ಲಿದ್ದ ಕೆಲವರನ್ನು ಚಾರ್ಟರ್ ವಿಮಾನಗಳ ಮೂಲಕ ಕತಾರ್ಗೆ ಕರೆಸಿಕೊಂಡು, ಅಲ್ಲಿಂದ ತನ್ನ ದೇಶಕ್ಕೆ ಸ್ಥಳಾಂತರ ಮಾಡುವ ಕೆಲಸವನ್ನು ಅಮೆರಿಕ ಮಾಡುತ್ತಿದೆ. ವಿಮಾನ ಸುರಕ್ಷಿತವಾಗಿ ಕತಾರ್ನಲ್ಲಿ ಲ್ಯಾಂಡ್ ಆಗಿದೆ. ಕಾಬೂಲ್ನಿಂದ ಬಂದ ಅಮೆರಿಕ ನಾಗರಿಕರನ್ನು ಸುರಕ್ಷಿತವಾಗಿ ನೋಡಿಕೊಂಡಿದ್ದಕ್ಕೆ ಕತಾರ್ ಸರ್ಕಾರಕ್ಕೆ ಧನ್ಯವಾದಗಳು ಎಂದು ಎಮಿಲಿ ಹಾರ್ನ್ ಹೇಳಿದ್ದಾರೆ.
ಸೆನೆಟರ್ಗಳಿಂದ ಬೈಡನ್ ವಿರುದ್ಧ ಕಿಡಿ..
ಅಫ್ಘಾನಿಸ್ತಾನದ ವಿಚಾರವಾಗಿ ಅಮೆರಿಕ ಸರಿಯಾದ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಆರೋಪಿಸಿ, ಅಮೆರಿಕ ಸಂಸದರು ಅಧ್ಯಕ್ಷ ಜೋ ಬೈಡನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಮೆರಿಕದ ಈ ನೀತಿಯಿಂದಾಗಿ ಚೀನಾದಂತಹ ರಾಷ್ಟ್ರಗಳು ಬಲಿಷ್ಠವಾಗಿವೆ. ದೇಶವನ್ನು ಸುರಕ್ಷತೆ ಮಟ್ಟ ಕಡಿಮೆಯಾಗಿದೆ ಎಂದು ಕಿಡಿಕಾರಿದ್ದಾರೆ.
ಭಯೋತ್ಪಾದಕರು ಮತ್ತು ಅವರನ್ನು ಬೆಂಬಲಿಸುವ ಮತ್ತು ಆಶ್ರಯ ನೀಡುವ ಸರ್ಕಾರಗಳು ಬೆಳೆಯುವಂತೆ ಜೋ ಬೈಡನ್ ಮಾಡಿದ್ದಾರೆ. ಅವರದ್ದು ವಿಫಲ ನಾಯಕತ್ವ. ಇನ್ನು ಮುಂದಿನ ದಿನಗಳಲ್ಲಿ ಇನ್ನೂ ಕಷ್ಟದ ದಿನಗಳು ಬರಲಿವೆ ಎಂದು ಸಂಸದ ರಿಕ್ ಸ್ಕಾಟ್ ಹೇಳಿದ್ದಾರೆ.
ಈ ವಾರ, ಅಮೆರಿಕನ್ನರ ಹತ್ಯೆಗಾಗಿ ತಾಲಿಬಾನ್ ಸರ್ಕಾರ ಹಕ್ಕಾನಿ ನೆಟ್ವರ್ಕ್ನ ನಾಯಕ ಮತ್ತು ಎಫ್ಬಿಐಗೆ ಬೇಕಾಗಿರುವ ಕುಖ್ಯಾತ ಭಯೋತ್ಪಾದಕ ಸಿರಾಜುದ್ದೀನ್ ಹಕ್ಕಾನಿಯನ್ನು ನೇಮಿಸಿರುವ ಆರೋಪ ಕೇಳಿ ಬಂದಿದ್ದು, ಇದೊಂದು ನಾಚಿಕೆಗೇಡಿನ ಸಂಗತಿ ಎಂದು ರಿಕ್ ಸ್ಕಾಟ್ ಹೇಳಿದ್ದಾರೆ.
ಇದನ್ನೂ ಓದಿ: 3000 ಮಂದಿಯನ್ನು ಬಲಿ ಪಡೆದ 9/11 ದಾಳಿಗೆ 20 ವರ್ಷ: ಸ್ವಚ್ಛತಾ ಸಿಬ್ಬಂದಿಯನ್ನು ಇಂದಿಗೂ ಕಾಡುತ್ತಿದೆ ಆರೋಗ್ಯ ಸಮಸ್ಯೆ