ವಾಷಿಂಗ್ಟನ್: ರಷ್ಯಾ - ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಅಮೆರಿಕ ತಲೆ ಬಿಸಿ ಮಾಡಿಕೊಂಡಿದೆ. ಹೇಗಾದರೂ ಮಾಡಿ ಯುದ್ಧಕ್ಕೆ ತಡೆಹಾಕಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ಸರ್ವ ಪ್ರಯತ್ನ ಮಾಡುತ್ತಿದ್ದಾರೆ. ಈ ನಡುವೆ ಅವರು ಇಂದು ರಷ್ಯಾ ವಿರುದ್ಧ ಹೊಸ ನಿರ್ಬಂಧಗಳನ್ನು ಹೇರುವ ಸಲುವಾಗಿ ಜಿ-7 ರಾಷ್ಟ್ರಗಳ ನಾಯಕರೊಂದಿಗೆ ಮಾತನಾಡಿದರು.
ಅನಾಹುತಕಾರಿ ಯುದ್ಧವನ್ನು ತಡೆಯಲು ಹಾಗೂ ಯುರೋಪಿನಲ್ಲಿ ಉಂಟಾಗಿರುವ ಬಿಕ್ಕಟ್ಟಿಗೆ ಅಂತ್ಯಹಾಡುವ ದೃಷ್ಟಿಯಿಂದ ಅಮೆರಿಕದ ಜನರೊಂದಿಗೂ ಮಾತನಾಡಲು ನಿರ್ಧರಿಸಿದ್ದಾರೆ. ಇದೇ ವೇಳೆ, ರಷ್ಯಾದ ವಿರುದ್ಧ G7 ಮಿತ್ರರಾಷ್ಟ್ರಗಳು ಒಪ್ಪಿಕೊಂಡಿರುವ ನಿರ್ಬಂಧಗಳನ್ನು ಬೈಡನ್ ಘೋಷಿಸುವ ನಿರೀಕ್ಷೆಯಿದೆ.
ಬ್ರಿಟನ್, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ಮತ್ತು ಅಮೆರಿಕದ ನಾಯಕರು ಜಿ-7 ಸಭೆಯಲ್ಲಿ ಭಾಗವಹಿಸಿದ್ದರು. ಅತ್ಯಂತ ರಹಸ್ಯವಾಗಿ ನಡೆದ ಈ ವರ್ಚುಯಲ್ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಮಾತನಾಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್, ನ್ಯಾಟೋ ಮೈತ್ರಿಕೂಟದ ರಾಷ್ಟ್ರಗಳೊಂದಿಗೂ ಮಾತನಾಡಿದ್ದು, ಯಾವುದೇ ದಾಳಿಯನ್ನು ಎದುರಿಸಲು ಒಗ್ಗಟ್ಟಾಗಿ ಹೋರಾಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ರಷ್ಯಾ ಗುರುವಾರ ಏಕಾಏಕಿ ಉಕ್ರೇನ್ ಮೇಲೆ ಯುದ್ಧ ಸಾರಿದೆ. ಈ ಮೂಲಕ ಉಕ್ರೇನ್‌ನ ಮೇಲೆ ವ್ಯಾಪಕವಾದ ದಾಳಿಯನ್ನು ಪ್ರಾರಂಭಿಸಿದೆ. ರಷ್ಯಾದ ಈ ದಾಳಿಯಲ್ಲಿ ಉಕ್ರೇನ್‌ನ 40 ಸೈನಿಕರು ಅಸುನೀಗಿದ್ದಾರೆ. 70ಕ್ಕೂ ಹೆಚ್ಚು ಸೇನಾ ನೆಲೆಗಳನ್ನು ರಷ್ಯಾ ಪಡೆಗಳು ನಾಶ ಪಡಿಸಿವೆ ಎಂದು ಉಕ್ರೇನ್ ಹೇಳಿಕೊಂಡಿದೆ.