ವಾಷಿಂಗ್ಟನ್: ಕೊರೊನಾ ವೈರಸ್ ಹಾವಳಿ ನಂತರ ಇದೇ ಮೊದಲ ಸಲ ಅಮೆರಿಕ ಪ್ರವಾಸ ಕೈಗೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 24ರಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರನ್ನು ಭೇಟಿ ಮಾಡಲಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ವೈಟ್ ಹೌಸ್ ಮಾಹಿತಿ ಹಂಚಿಕೊಂಡಿದೆ.
ಅಮೆರಿಕ ಪ್ರವಾಸ ಕೈಗೊಳ್ಳಲಿರುವ ನರೇಂದ್ರ ಮೋದಿ ಶ್ವೇತಭವನದಲ್ಲಿ ಜೋ ಬೈಡನ್ ಜೊತೆ ದ್ವಿಪಕ್ಷೀಯ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಇದರ ಜೊತೆಗೆ ವಾಷಿಂಗ್ಟನ್ನಲ್ಲಿ ಅಮೆರಿಕ ಬೈಡನ್ ಆತಿಥ್ಯವಹಿಸುವ ಮೊದಲ ಕ್ವಾಡ್ ಶೃಂಗಸಭೆಯಲ್ಲೂ ಭಾಗಿಯಾಗಲಿದ್ದಾರೆ.
ಜನವರಿ ತಿಂಗಳಲ್ಲಿ ಅಮೆರಿಕದಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದಿರುವ ಬೈಡನ್ ಅವರೊಂದಿಗೆ ನಮೋ ಮೊದಲ ಭೇಟಿ ಇದಾಗಿದ್ದು, ಅನೇಕ ನಿರೀಕ್ಷೆ ಹುಟ್ಟುಹಾಕಿದೆ. ಪ್ರಧಾನಿ ಮೋದಿ 2019ರಲ್ಲಿ ಕೊನೆಯ ಬಾರಿ ಅಮೆರಿಕ ಭೇಟಿ ನೀಡಿದ್ದರು. ಹ್ಯೂಸ್ಟನ್ನಲ್ಲಿ ನಡೆದ ಅನಿವಾಸಿ ಭಾರತೀಯರ ಬೃಹತ್ ಕಾರ್ಯಕ್ರಮ 'ಹೌಡಿ ಮೋದಿ'ಯಲ್ಲಿ ಭಾಗಿಯಾಗಿದ್ದರು.
ಕ್ವಾಡ್ ಶೃಂಗಸಭೆಯಲ್ಲಿ ಅಫ್ಘಾನಿಸ್ತಾನ ಬಿಕ್ಕಟ್ಟು, ಕೋವಿಡ್, ಇಂಡೋ ಪೆಸಿಫಿಕ್ ಸಮಸ್ಯೆ ಸೇರಿದಂತೆ ಅನೇಕ ಜಾಗತಿಕ ಸವಾಲುಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಇದರ ಜೊತೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಖಾಯಂ ಸದಸ್ಯತ್ವ, ಪ್ರಸ್ತುತ ಪರಿಸ್ಥಿತಿಗೆ ಅನುಗುಣವಾಗಿ ವಿಶ್ವಸಂಸ್ಥೆಯಲ್ಲಿನ ಸುಧಾರಣೆಗಳ ಬಗ್ಗೆಯೂ ಪ್ರಧಾನಿ ಮೋದಿ ಪ್ರಸ್ತಾಪ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ಶೃಂಗಸಭೆಯಲ್ಲಿ ಆಸ್ಟ್ರೇಲಿಯಾ, ಜಪಾನ್ ಪ್ರಧಾನಿಗಳು ಭಾಗಿಯಾಗಲಿದ್ದಾರೆ. ಸೆಪ್ಟೆಂಬರ್ 25ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗಿಯಾಗಲು ಮೋದಿ ನ್ಯೂಯಾರ್ಕ್ಗೆ ತೆರಳಲಿದ್ದಾರೆ.