ವಾಷಿಂಗ್ಟನ್: ಕೊರೊನಾ ರೂಪಾಂತರಗಳಿಂದ ಜನರನ್ನು ರಕ್ಷಿಸಲು ಕೋವಿಡ್ ಬೂಸ್ಟರ್ ಡೋಸ್ಅನ್ನು ಅಭಿವೃದ್ಧಿ ಪಡಿಸುವ ಯೋಜನೆಯ ಬಗ್ಗೆ ಅಮೆರಿಕದ ಔಷಧಿ ತಯಾರಕ ಕಂಪನಿ ಫೈಜರ್ ಪ್ರಕಟಣೆ ಹೊರಡಿಸಿದೆ. ಈ ಯೋಜನೆಯ ಅಗತ್ಯವಿದೆಯೇ? ಇಲ್ಲವೇ ಎಂಬುದು ದೇಶಾದ್ಯಂತ ಗೊಂದಲ ಸೃಷ್ಟಿಸಿದೆ.
ಫೈಜರ್ ಹಾಗೂ ಜರ್ಮನ್ ಸಂಸ್ಥೆ ಬಯೋಎಂಟೆಕ್ ಸಂಸ್ಥೆ ಗುರುವಾರ ಬೂಸ್ಟರ್ ಅಭಿವೃದ್ಧಿ ಪಡಿಸುವ ಲಸಿಕೆಗೆ ಅನುಮೋದನೆ ಪಡೆಯಲು ಯೋಜಿಸುತ್ತಿರುವುದಾಗಿ ಪ್ರಕಟಣೆ ಹೊರಡಿಸಿದೆ.
ವ್ಯಾಕ್ಸಿನ್ ಪಡೆದ ನಂತರ ವ್ಯಕ್ತಿಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಲು 6-12 ತಿಂಗಳವರೆಗೆ ಬೇಕಾಗುತ್ತದೆ. ಪ್ರಸ್ತುತ ಕೋವಿಡ್ ಲಸಿಕೆಯ ಡೇಟಾ ನೋಡಿದ್ದೇವೆ. ಎರಡನೇ ಡೋಸ್ ಪಡೆದ ಆರು ತಿಂಗಳ ನಂತರ ನೀಡಿದ ಬೂಸ್ಟರ್ ಡೋಸ್ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಸಹಾರಿಯಾಗಲಿದೆ ಅಂತಾ ಅಧ್ಯಯನದ ಆರಂಭಿಕ ಮಾಹಿತಿಯಿಂದ ತಿಳಿದುಬಂದಿದೆ ಎಂದು ಕಂಪನಿಗಳು ತಿಳಿಸಿವೆ. ಅಲ್ಲದೆ, ಇದು ಕೋವಿಡ್ ರೂಪಾಂತರಗಳಿಂದ ರಕ್ಷಿಸುತ್ತದೆ. ಡೆಲ್ಟಾ ವಿರುದ್ಧ ಈ ಬೂಸ್ಟರ್ ಪರಿಣಾಮಕಾರಿಯಾಗಿ ಕೆಲಸ ಮಾಡಲಿದೆ ಎಂದು ಫೈಜರ್ ಸಂಸ್ಥೆ ತಿಳಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಅಮೆರಿಕದ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್ (ಸಿಡಿಸಿ) ಮತ್ತು ಫುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್ಡಿಎ), ಎರಡು ಡೋಸ್ ಲಸಿಕೆ ಪಡೆದ ಅಮೆರಿಕನ್ನರಿಗೆ ಬೂಸ್ಟರ್ ಶಾಟ್ ಅಗತ್ಯವಿಲ್ಲ. ಲಸಿಕೆ ಪಡೆದವರು ಈಗಾಗಲೇ ಸುರಕ್ಷಿತವಾಗಿದ್ದಾರೆ ಎಂದು ಸ್ಪಷ್ಟಪಡಿಸಿದೆ.
ಇತ್ತೀಚಿನ ದಿನಗಳಲ್ಲಿ ಡೆಲ್ಟಾ ರೂಪಾಂತರವು ಅಮೆರಿಕದಲ್ಲಿ ವ್ಯಾಪಕವಾಗಿ ಹರಡುತ್ತಿದೆ.