ವಾಷಿಂಗ್ಟನ್: ಈ ವರ್ಷದ ಆರಂಭದಲ್ಲಿ ಚೀನಾದೊಂದಿಗೆ ಮಾಡಿಕೊಂಡಿದ್ದ ವ್ಯಾಪಾರ ಒಪ್ಪಂದವನ್ನು 'ಐತಿಹಾಸಿಕ' ಎಂದು ಬಣ್ಣಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈಗ ಅದೇ ಒಪ್ಪಂದದ ಬಗ್ಗೆ ವಿಭಿನ್ನ ಭಾವನೆ ವ್ಯಕ್ತವಾಗುತ್ತಿದೆ ಎಂದಿದ್ದಾರೆ.
ಕೊರೊನಾ ವೈರಸ್ ಹರಡಲು ಚೀನಾ ಕಾರಣ ಎಂದು ಮತ್ತೊಮ್ಮೆ ವಾಗ್ದಾಳಿ ನಡೆಸುವಾಗ ಈ ವಿಚಾರವನ್ನು ಟ್ರಂಪ್ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.
ಯುಎಸ್ ಮತ್ತು ಚೀನಾ ತಮ್ಮ 22 ತಿಂಗಳ ಸುದೀರ್ಘ ವ್ಯಾಪಾರ ಯುದ್ಧವನ್ನು ಕೊನೆಗೊಳಿಸಿ ಜನವರಿಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದವು. ಈ ಒಪ್ಪಂದದ ಪ್ರಕಾರ ಯುಎಸ್ ಸರಕುಗಳ ಖರೀದಿಯನ್ನು 200 ಬಿಲಯನ್ ಡಾಲರ್ಗೆ ಹೆಚ್ಚಿಸಲು ಚೀನಾ ಒಪ್ಪಿಕೊಂಡಿತ್ತು. ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಇದು ಐತಿಹಾಸಿಕ ಒಪ್ಪಂದ ಎಂದು ಟ್ರಂಪ್ ಬಣ್ಣಿಸಿದ್ದರು. ಆದರೆ, ಕೊರೊನಾ ಸೋಂಕು ವಿಶ್ವವ್ಯಾಪಿ ಹರಡಲು ಪ್ರಾರಂಭವಾದಾಗಿನಿಂದ ಟ್ರಂಪ್ ಚೀನಾದ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇದ್ದಾರೆ.
ಮಂಗಳವಾರದವರೆಗೆ ಅಮೆರಿಕದಲ್ಲಿ 1.5 ಮಿಲಿಯನ್ ಕೊರೊನಾ ಪ್ರಕರಣಗಳು ದಾಖಲಾಗಿದ್ದು, 92 ಸಾವಿರ ಜನರು ಮೃತಪಟ್ಟಿದ್ದಾರೆ. ಜಾಗತಿಕವಾಗಿ 3,20 ಲಕ್ಷ ಜನರನ್ನು ಕೊರೊನಾ ಬಲಿ ಪಡೆದಿದೆ.