ನ್ಯೂಯಾರ್ಕ್: ಯಾವುದೇ ದೇಶದೊಂದಿಗೆ ಶೀತಲ ಸಮರ ಅಥವಾ ನೇರ ಯುದ್ಧ ನಡೆಸುವ ಉದ್ದೇಶ ಚೀನಾಕ್ಕೆ ಇಲ್ಲ. ವಿವಾದಗಳನ್ನು ಬಗೆಹರಿಸಲು ಮಾತುಕತೆ ಮುಂದುವರೆಸಲಾಗುವುದು ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹೇಳಿದ್ದಾರೆ.
ವಿಡಿಯೋ ಕಾನ್ಫರೆನ್ಸ್ ಮೂಲಕ 75ನೇ ವಿಶ್ವಸಂಸ್ಥೆ ಸಾಮಾನ್ಯ ಸಭೆ ಚರ್ಚೆಯಲ್ಲಿ ಮಾತನಾಡಿದ ಅವರು, ಯಾವುದೇ ದೇಶದೊಂದಿಗೆ ಶೀತಲ ಸಮರ ಅಥವಾ ನೇರ ಯುದ್ಧ ಮಾಡುವ ಉದ್ದೇಶ ನಮಗಿಲ್ಲ. ನಾವು ಭಿನ್ನಾಭಿಪ್ರಾಯಗಳನ್ನು ಕಡಿಮೆ ಮಾಡುವ ಪ್ರಯತ್ನ ಮುಂದುವರೆಸುತ್ತೇವೆ ಮತ್ತು ಸಮಾಲೋಚನೆ ಮೂಲಕ ಇತರರೊಂದಿಗಿನ ವಿವಾದಗಳನ್ನು ಬಗೆಹರಿಸುತ್ತೇವೆ ಎಂದಿದ್ದಾರೆ.
ಅಮೆರಿಕಾ ಮತ್ತು ಚೀನಾ ನಡುವಿನ ಸಂಬಂಧ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಈ ಹೇಳಿಕೆ ಬಂದಿದೆ. ಕೋವಿಡ್-19 ವಿಚಾರದಲ್ಲಿ ಚೀನಾ ವಿರುದ್ಧ ಅಮೆರಿಕಾ ಆಕ್ರೋಶ ವ್ಯಕ್ತಪಡಿಸಿತ್ತು. ಡ್ರ್ಯಾಗನ್ ಜೊತೆ ವ್ಯಾಪಾರ ಯುದ್ಧ ನಡೆಸುತ್ತಿದೆ. ಅಲ್ಲದೆ ಚೀನಾ ಮತ್ತು ಭಾರತ ಪೂರ್ವ ಲಡಾಕ್ ವಿಚಾರದಲ್ಲಿ ಸಂಘರ್ಷ ನಡೆಸುತ್ತಿರುವ ಕಾರಣ ಕ್ಸಿ ಜಿನ್‌ಪಿಂಗ್ ಇಂತಹ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ಕೋವಿಡ್-19 ಬಗ್ಗೆ ಕ್ಸಿ ಜಿನ್‌ಪಿಂಗ್ ಮಾತನಾಡಿದ್ದು, ನಾವು ಜನರನ್ನು ಮತ್ತು ಜೀವನವನ್ನು ಮೊದಲ ಸ್ಥಾನದಲ್ಲಿಡಬೇಕು ಮತ್ತು ವೈರಸ್ ಹರಡುವುದನ್ನು ತಡೆಗಟ್ಟಬೇಕು ಎಂದಿದ್ದಾರೆ.