ನ್ಯೂಯಾರ್ಕ್: ಪ್ರಸ್ತುತ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಇದೀಗ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಪಾಲ್ಗೊಳ್ಳಲು ನ್ಯೂಯಾರ್ಕ್ಗೆ ತೆರಳಿದ್ದಾರೆ.
ಇಂದಿನಿಂದ ಐದು ದಿನಗಳ ಕಾಲ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನ ನಡೆಯಲಿದ್ದು, ಜಾಗತಿಕವಾಗಿ ಈ ಅಧಿವೇಶನ ವಿಶೇಷ ಮಹತ್ವ ಪಡೆದುಕೊಂಡಿದೆ. ಇಂದಿನ ಹವಾಮಾನ ಬದಲಾವಣೆಯ ಕುರಿತಾದ ಅಧಿವೇಶನದಲ್ಲಿ ಹಲವು ವಿಚಾರಗಳು ಮಂಡನೆಯಾಗಲಿವೆ.
ಹೌಡಿ ಮೋದಿ: ಟ್ರಂಪ್ ಭಾಗಿ ಅಭೂತಪೂರ್ವ ಕ್ಷಣವೆಂದ ಮೋದಿ..!
ನವೀಕರಿಸಬಹುದಾದ ಇಂಧನ ಹಾಗೂ ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯಕ್ಕಾಗಿ ಒಕ್ಕೂಟದ ಬಗ್ಗೆ ಪ್ರಧಾನಿ ಮೋದಿ ಅಧಿವೇಶನದಲ್ಲಿ ತಮ್ಮ ನಿಲುವು ಮಂಡಿಸಲಿದ್ದಾರೆ.
ಜಾಗತಿಕ ಹವಾಮಾನ ವಿಚಾರದಲ್ಲಿ ಭಾರತದ ಪಾತ್ರ ಮತ್ತು ಕೊಡುಗೆ ಬಗ್ಗೆ ಪ್ರಧಾನಿ ಮೋದಿ ಮಾತನಾಡಲಿದ್ದು, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟಾನಿಯೋ ಗುಟೆರಸ್, ನ್ಯೂಜಿಲ್ಯಾಂಡ್ ಪ್ರಧಾನಿ ಜಸಿಂಡಾ ಆರ್ಡೆರ್ನ್ ಹಾಗೂ ಮಾರ್ಷಲ್ ದ್ವೀಪದ ಅಧ್ಯಕ್ಷ ಹಿಲ್ಡಾ ಹೀನ್ ಬಳಿಕ ಮೋದಿ ಭಾಷಣ ಮಾಡಲಿದ್ದಾರೆ.
ಇಂದು ನಡೆಯುವ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಕೇವಲ 63 ದೇಶಗಳಿಗೆ ಆಹ್ವಾನ ನೀಡಲಾಗಿದ್ದು, ಅಮೆರಿಕ, ಬ್ರೆಜಿಲ್ ಹಾಗೂ ಜಪಾನ್ ದೇಶಗಳನ್ನು ಈ ಉನ್ನತಮಟ್ಟದ ಸಭೆಯಿಂದ ಹೊರಗಿಡಲಾಗಿದೆ.