ವಾಷಿಂಗ್ಟನ್: ಮಂಗಳನ ಅಂಗಳದಲ್ಲಿ ಪರ್ಸೆವೆರೆನ್ಸ್ ರೋವರ್ಅನ್ನು ಯಶಸ್ವಿಯಾಗಿ ಇಳಿಸಿ ನಾಸಾ ಐತಿಹಾಸಿಕ ಸಾಧನೆ ಮಾಡಿದೆ.
ಈ ಐತಿಹಾಸಿಕ ಯೋಜನೆಯಲ್ಲಿ ಹಲವು ವಿಜ್ಞಾನಿಗಳು ಭಾಗಿಯಾಗಿದ್ದಾರೆ. ಆದ್ರೆ ವಿಶೇಷವೆಂದ್ರೆ, ಭಾರತೀಯ ಮೂಲದ ಅಮೆರಿಕನ್ ಮಹಿಳಾ ವಿಜ್ಞಾನಿ ಈ ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಭಾರತೀಯ-ಅಮೆರಿಕಾ ಮೂಲದ ಡಾ.ಸ್ವಾತಿ ಮೋಹನ್ ಅವರು ಮಂಗಳ ಗ್ರಹದಲ್ಲಿ ರೋವರ್ ಲ್ಯಾಂಡ್ ಮಾಡುವ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು. ಇವರ ಮುಂದಾಳತ್ವದಲ್ಲಿ ರೋವರ್ನ ಲ್ಯಾಂಡಿಂಗ್ ಮತ್ತು ಆ್ಯಟಿಟ್ಯೂಡ್ ನಿಯಂತ್ರಣ ವಿಭಾಗ ಯಶಸ್ವಿಯಾಗಿ ಕಾರ್ಯನಿರ್ವಹಿಸಿದೆ.
"ಲ್ಯಾಂಡಿಂಗ್ ದೃಢಪಟ್ಟಿದೆ! ಮಂಗಳನಲ್ಲಿ ರೋವರ್ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ, ಸಿಗ್ನಲ್ಗಳ ಹುಡುಕಾಟ ಆರಂಭವಾಗಿದೆ' ಎಂದು ನಾಸಾ ಎಂಜಿನಿಯರ್ ಡಾ.ಸ್ವಾತಿ ಮೋಹನ್ ಉದ್ಗರಿಸಿದ್ದಾರೆ. (ಇದನ್ನೂ ಓದಿ: ಮಂಗಳನ ಅಂಗಳದಲ್ಲಿ ರೋವರ್ ಲ್ಯಾಂಡಿಂಗ್... ನಾಸಾದಿಂದ ಮತ್ತೊಂದು ಮೈಲಿಗಲ್ಲು)
ರೋವರ್ ಮಂಗಳನ ಅಂಗಳದಲ್ಲಿ ಲ್ಯಾಂಡ್ ಆಗುವುದನ್ನು ನೋಡುತ್ತಿದ್ದರೆ, ಕಂಟ್ರೋಲ್ ರೂಮಿನಲ್ಲಿ ಶಾಂತತೆಯಿಂದ ಡಾ.ಮೋಹನ್ ಅವರು GN&C ಸಬ್ಸಿಸ್ಟಮ್ ಮತ್ತು ಯೋಜನೆಯ ಇತರ ತಂಡಗಳ ಜೊತೆ ಸಂವಹನ ನಡೆಸಿದ್ದರು.
ಡಾ.ಮೋಹನ್ ಅವರು ಒಂದು ವರ್ಷದವರಿದ್ದಾಗಲೇ ಭಾರತದಿಂದ ಅಮೆರಿಕಾಗೆ ವಲಸೆ ಹೋಗಿದ್ದಾರೆ. ನಾರ್ಥರನ್ ವರ್ಜಿನಿಯಾ-ವಾಷಿಂಗ್ಟನ್ ಡಿಸಿಯಲ್ಲಿ ಬಹುಪಾಲು ತಮ್ಮ ಬಾಲ್ಯ ಕಳೆದಿರುವ ಇವರು, ತಮ್ಮ 9ನೇ ವಯಸ್ಸಿನಲ್ಲಿ 'ಸ್ಟಾರ್ ಟ್ರೆಕ್' ಟಿವಿ ಸಿರೀಸ್ ನೋಡಿ ವಿಶ್ವದ ಹೊಸ ಹಾಗೂ ಸುಂದರ ಪ್ರದೇಶಗಳನ್ನು ನೋಡಿ ಆಶ್ಚರ್ಯಗೊಂಡಿದ್ದರು. ಬಳಿಕ ಬ್ರಹ್ಮಾಂಡದಲ್ಲಿರುವ ಹೊಸ ಹಾಗೂ ಇನ್ನಷ್ಟು ಸುಂದರ ತಾಣಗಳನ್ನು ಪತ್ತೆ ಹಚ್ಚಲು ಆಸೆ ಪಟ್ಟಿದ್ದರು.
ಆದ್ರೆ ಇವರು 16ನೇ ವಯಸ್ಸಿನವರಗೂ ಶಿಶುವೈದ್ಯೆ ಆಗಬೇಕೆಂದುಕೊಂಡಿದ್ದರು. ಆದ್ರೆ ಭೌತಶಾಸ್ತ್ರ ತರಗತಿಯಲ್ಲಿ ಅದ್ಭುತ ಶಿಕ್ಷಕರ ಪ್ರೇರಣೆಯಿಂದ ಬಾಹ್ಯಾಕಾಶದಲ್ಲಿ ಸಾಧನೆ ಮಾಡಲು ಎಂಜಿನಿಯರಿಂಗ್ ಒಂದೇ ಮಾರ್ಗ ಎಂದು ಅರಿತು, ತಮ್ಮ ಗುರಿ ಬದಲಿಸಿದ್ದರು.
ನಂತರ ಕಾರ್ನೆಲ್ ವಿವಿಯಿಂದ ಮೆಕ್ಯಾನಿಕಲ್ ಮತ್ತು ಏರೋಸ್ಪೇಸ್ ಎಂಜಿನಿಯರಿಂಗ್ ಬ್ಯಾಚ್ಯುಲರ್ ಪದವಿ ಪಡೆದು ಎಂಐಟಿಯಲ್ಲಿ ಆಸ್ಟ್ಟೋನಾಟಿಕ್ಸ್ನಲ್ಲಿ ಎಂಎಸ್ ಮತ್ತು ಪಿಹೆಚ್ಡಿ ಪದವಿ ಗಳಿಸಿದರು. ಆ ಬಳಿಕ ನಾಸಾ ಸೇರಿದ ಡಾ.ಮೋಹನ್ ಅವರು ಪರ್ಸೆವೆರೆನ್ಸ್ ರೋವರ್ ಯೋಜನೆಯ ಜೊತೆ ನಾಸಾದ ವಿವಿಧ ಮಹತ್ವದ ಯೋಜನೆಗಳಲ್ಲೂ ಭಾಗಿಯಾಗಿದ್ದಾರೆ.