ವಾಶಿಂಗ್ಟನ್: ಅಮೆರಿಕದಲ್ಲಿ ಇದೇ ನವೆಂಬರ್ 3 ರಂದು ಅಧ್ಯಕ್ಷೀಯ ಚುನಾವಣೆಗಳು ನಡೆಯಲಿದ್ದು, ಚುನಾವಣಾ ಪ್ರಚಾರ ಅತ್ಯಂತ ಭರಾಟೆಯಿಂದ ಸಾಗಿದೆ. ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳಾದ ರಿಪಬ್ಲಿಕನ್ ಹಾಗೂ ಡೆಮೊಕ್ರಾಟ್ ಪಕ್ಷಗಳು ತಮ್ಮ ತಮ್ಮ ಚುನಾವಣಾ ನಿಲುವು, ಪ್ರಣಾಳಿಕೆಗಳನ್ನು ಜನರ ಮುಂದೆ ಪ್ರಸ್ತುತಪಡಿಸುತ್ತಿವೆ. ಆದರೆ ಈ ಬಾರಿ ವಿವಿಧ ಪ್ರಮುಖ ವಿಚಾರಗಳಲ್ಲಿ ಎರಡೂ ಪಕ್ಷಗಳ ನಿಲುವುಗಳು ತೀರಾ ಭಿನ್ನವಾಗಿರುವುದು ಗಮನಾರ್ಹ ಸಂಗತಿಯಾಗಿದ್ದು, ಮತದಾರರ ಮುಂದೆ ಹಲವಾರು ಪ್ರಶ್ನೆಗಳನ್ನು ತಂದೊಡ್ಡಿವೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಜವಾಗಿಯೇ ತಾವು ಪ್ರತಿನಿಧಿಸುವ ರಿಪಬ್ಲಿಕನ್ ಪಕ್ಷದ ನಿಲುವಿಗೆ ಅಂಟಿಕೊಂಡಿದ್ದಾರೆ. ದೇಶದ ಆರ್ಥಿಕ ಸ್ಥಿತಿ ಚೇತರಿಕೆಗಾಗಿ ತೆರಿಗೆ ಕಡಿತ, ಆರ್ಥಿಕ ನಿರ್ಬಂಧಗಳ ಸಡಿಲಿಕೆ ಅಗತ್ಯ ಎಂಬ ಬಹುತೇಕ ರಿಪಬ್ಲಿಕನ್ ಪಾರ್ಟಿ ಸದಸ್ಯರ ಅಭಿಪ್ರಾಯವಾಗಿದ್ದು, ಟ್ರಂಪ್ ಸಹ ಇದೇ ಮಾರ್ಗದಲ್ಲಿ ಸಾಗುತ್ತಿದ್ದಾರೆ. ಇನ್ನು ದೇಶದಲ್ಲಿ ನಡೆಯುತ್ತಿರುವ ಸಂಸ್ಕೃತಿಗಳ ಮಧ್ಯದ ಹೋರಾಟದಲ್ಲಿ ತಾವೊಬ್ಬ ಸಂಪ್ರದಾಯದ ರಕ್ಷಕ ಎಂದು ಟ್ರಂಪ್ ಬಿಂಬಿಸಿಕೊಂಡಿದ್ದಾರೆ. ತಾವು ಎರಡನೇ ಬಾರಿಗೆ ಅಧ್ಯಕ್ಷರಾದಲ್ಲಿ ತಮ್ಮ ಸರ್ಕಾರದ ನಿಲುವುಗಳೇನಿರಲಿವೆ ಎಂಬ ಬಗ್ಗೆ ಅವರು ಈಗಾಗಲೇ ಸಾಕಷ್ಟು ಬಾರಿ ಹೇಳಿದ್ದಾರೆ. ತಮ್ಮ ಎದುರಾಳಿ ಡೆಮೊಕ್ರಾಟಿಕ್ ಪಕ್ಷದ ಜೋ ಬಿಡೆನ್ ಅವರನ್ನು ಹಿಮ್ಮೆಟ್ಟಿಸುವುದು ಹಾಗೂ ಡೆಮೊಕ್ರಾಟಿಕ್ ಪಾರ್ಟಿಯ ಎಡಪಂಥೀಯ ನೀತಿ-ನಿಯಮಗಳು ದೇಶದಲ್ಲಿ ಜಾರಿಯಾಗದಂತೆ ನೋಡಿಕೊಳ್ಳುವುದು ಟ್ರಂಪ್ ಅವರ ಪ್ರಮುಖ ಗುರಿಗಳಾಗಿವೆ.
ಇನ್ನು ಜೋ ಬಿಡೆನ್ ಅವರನ್ನು ನೋಡುವುದಾದರೆ, ಟ್ರಂಪ್ ಹೇಳುವಂತೆ ಬಿಡೆನ್ ಸಂಪೂರ್ಣ ಸಮಾಜವಾದಿ ನಿಲುವಿನವರೇನೂ ಆಗಿಲ್ಲ. ಆದರೂ ಅವರೊಬ್ಬ ಮಧ್ಯಮ ಎಡಚಿಂತನೆಗಳ ಪ್ರತಿಪಾದಕರಾಗಿದ್ದು, ಕೊರೊನಾ ವೈರಸ್ನಿಂದ ದೇಶವನ್ನು ಪಾರು ಮಾಡುವುದು, ಜನಾಂಗೀಯ ಘರ್ಷಣೆಯನ್ನು ಕೊನೆಗಾಣಿಸುವುದು ಹಾಗೂ ಅಸಮಾನತೆಯನ್ನು ತೊಡೆದು ಹಾಕುವುದು ಅವರ ಮುಖ್ಯ ಗುರಿಗಳಾಗಿವೆ.
ಪ್ರಮುಖ ವಿಚಾರಗಳಲ್ಲಿ ಎರಡೂ ಪಕ್ಷಗಳ ನಿಲುವುಗಳೇನು?
ಕೊರೊನಾ ವೈರಸ್
• ಡೊನಾಲ್ಡ್ ಟ್ರಂಪ್ ಮತ್ತೊಂದು ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಲು ಕೊರೊನಾ ವೈರಸ್ ಬಿಕ್ಕಟ್ಟು ಬಹುದೊಡ್ಡ ಅಡ್ಡಿಯಾಗಿದೆ. ಚುನಾವಣೆಗೆ ಇನ್ನೇನು ಕೆಲವೇ ದಿನಗಳಿರುವಾಗ ತಾವೂ ಸಹ ವೈರಸ್ ಸೋಂಕಿಗೆ ಒಳಗಾಗಿದ್ದು ಈ ಬಿಕ್ಕಟ್ಟು ಮತ್ತಷ್ಟು ಉಲ್ಬಣಿಸುವಂತಾಗಿದೆ. ಆದರೆ ವೈರಸ್ ಸೋಂಕು ನಿಯಂತ್ರಣವು ಆಯಾ ರಾಜ್ಯಗಳ ಗವರ್ನರ್ಗಳಿಗೆ ಸೇರಿದ ಜವಾಬ್ದಾರಿಯಾಗಿದೆ ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ.
• ಅಮೆರಿಕದ ಸಂಸತ್ತು ಮಾರ್ಚ್ ಹಾಗೂ ಏಪ್ರಿಲ್ ತಿಂಗಳುಗಳಲ್ಲಿ ಈಗಾಗಲೇ 3 ಟ್ರಿಲಿಯನ್ ಡಾಲರ್ನಷ್ಟು ಕೊರೊನಾ ವೈರಸ್ ಪರಿಹಾರ ನಿಧಿ ಹಂಚಿಕೆ ಮಾಡಲು ಅನುಮೋದನೆ ನೀಡಿದೆ. ಆದರೆ ಮತ್ತೊಂದು ಸುತ್ತಿನ ಪರಿಹಾರ ಅನುಮೋದನೆಗಾಗಿ ಎರಡೂ ಪಕ್ಷಗಳು ಕಾದಾಟಕ್ಕಿಳಿದಿವೆ.
• ಅಧ್ಯಕ್ಷೀಯ ಅಧಿಕಾರ ಹಾಗೂ ಒಕ್ಕೂಟ ಮಾದರಿ ವ್ಯವಸ್ಥೆಗಳು ಇಂಥ ಬಿಕ್ಕಟ್ಟುಗಳನ್ನು ಯಶಸ್ವಿಯಾಗಿ ನಿಭಾಯಿಸಲೆಂದೇ ಇವೆ. ಆದರೆ ಅಧ್ಯಕ್ಷ ಟ್ರಂಪ್ ಅವರು ತಮ್ಮ ಜವಾಬ್ದಾರಿ ನಿಭಾಯಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಬಿಡೆನ್ ಆರೋಪಿಸಿದ್ದಾರೆ.
• ಕೊರೊನಾ ವೈರಸ್ ಕುರಿತಂತೆ ದೇಶದ ಪ್ರಮುಖ ವಿಜ್ಞಾನಿಗಳು ಹಾಗೂ ವೈದ್ಯರ ತಂಡವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜನರಿಗೆ ಸೂಕ್ತ ಮಾಹಿತಿಯನ್ನು ನೀಡಲಾಗುವುದು ಹಾಗೂ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಮತ್ತೆ ಸಕ್ರಿಯ ಪಾತ್ರ ವಹಿಸಲಾಗುವುದು ಎಂದು ಬಿಡೆನ್ ಆಶ್ವಾಸನೆ ನೀಡಿದ್ದಾರೆ. ಇನ್ನು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲು ತಮಗಿರುವ ವಿಶೇಷ ಅಧ್ಯಕ್ಷೀಯ ಅಧಿಕಾರವನ್ನು ಉಪಯೋಗಿಸುವುದಾಗಿ ಅವರು ಹೇಳಿದ್ದಾರೆ.
ಕೊರೊನಾ ವೈರಸ್ ಹೋಗುವ ಮುನ್ನ ಇನ್ನೂ ಹೆಚ್ಚು ಪ್ರಖರವಾಗಿ ದೇಶವನ್ನು ಬಾಧಿಸಲಿದೆ ಎಂದು ಬೇಸಿಗೆ ಕಾಲದ ಅವಧಿಯಲ್ಲಿ ಟ್ರಂಪ್ ಹೇಳಿದ್ದರು. ಇದರ ಬೆನ್ನಲ್ಲೇ ಸ್ವತಃ ವೈರಸ್ ಸೋಂಕಿಗೆ ತುತ್ತಾದರು.
ಸದ್ಯದ ಪರಿಸ್ಥಿತಿಯಲ್ಲಿ, ಪ್ರತಿ 10 ಅಮೆರಿಕನ್ನರ ಪೈಕಿ 7 ಜನರು ದೇಶವು ತಪ್ಪು ದಾರಿಯಲ್ಲಿ ಸಾಗುತ್ತಿದೆ ಎಂದು ಭಾವಿಸಿದ್ದಾರೆ. ಕೊರೊನಾ ವೈರಸ್ ಬಿಕ್ಕಟ್ಟನ್ನು ಟ್ರಂಪ್ ನಿಭಾಯಿಸಿದ ರೀತಿಗೆ ಶೇ 39 ರಷ್ಟು ಅಮೆರಿಕನ್ನರು ಮಾತ್ರ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ದಿ ಅಸೋಸಿಯೇಟೆಡ್ ಪ್ರೆಸ್ - ಎನ್ಓಆರ್ಸಿ ಸೆಂಟರ್ ಫಾರ್ ಪಬ್ಲಿಕ್ ಅಫೇರ್ಸ್ ರಿಸರ್ಚ್ ಸಂಸ್ಥೆಯು ನಡೆಸಿದ ಸಮೀಕ್ಷೆಯಲ್ಲಿ ಈ ಮಾಹಿತಿಗಳು ಬಹಿರಂಗವಾಗಿವೆ.
ಕೊರೊನಾ ಬಿಕ್ಕಟ್ಟಿನಿಂದ ಬಳಲುತ್ತಿರುವ ಉದ್ಯಮಗಳು ಹಾಗೂ ವ್ಯಕ್ತಿಗಳಿಗೆ ಫೆಡರಲ್ ಸರ್ಕಾರ ಹಾಗೂ ಸ್ಥಳೀಯ ಸರ್ಕಾರಗಳು ಉದಾರವಾಗಿ ಸಹಾಯ ನೀಡಲು ಮುಂದೆ ಬರಬೇಕೆಂಬುದು ಬಿಡೆನ್ ಅವರ ನಿಲುವಾಗಿದೆ. ಖಾಸಗಿ ವಲಯದಲ್ಲಿ ಉತ್ಪಾದನೆ ಹೆಚ್ಚಿಸಲು ವಿಶೇಷ ರಕ್ಷಣಾ ಉತ್ಪಾದನೆ ಕಾನೂನನ್ನು ಬಳಸುವುದು ಬಿಡೆನ್ ಆಲೋಚನೆಯಾಗಿದೆ.
ಶಿಕ್ಷಣದ ಬಗ್ಗೆ ಟ್ರಂಪ್-ಬಿಡೆನ್ ವಿಚಾರಗಳು
ಶಾಲೆಗಳನ್ನು ಶೀಘ್ರವೇ ಪುನಾರಂಭಿಸುವುದಾಗಿ ಹಾಗೂ ರ್ಯಾಪಿಡ್ ಕೊರೊನಾ ಟೆಸ್ಟ್ ಕಿಟ್ಗಳನ್ನು ಶಾಲೆಗಳಿಗೆ ಒದಗಿಸುವುದಾಗಿ ಟ್ರಂಪ್ ಹೇಳಿದ್ದಾರೆ. ಈ ರ್ಯಾಪಿಡ್ ಟೆಸ್ಟ್ ಕಿಟ್ಗಳನ್ನು ಬಳಸಿ ಆಯಾ ರಾಜ್ಯಗಳ ಗವರ್ನರ್ಗಳು 1 ರಿಂದ 12 ನೇ ತರಗತಿಯ ಶಾಲೆಗಳು ಪುನಾರಂಭವಾಗುವಂತೆ ನೋಡಿಕೊಳ್ಳಬೇಕೆಂದು ಟ್ರಂಪ್ ಸೂಚಿಸಿದ್ದಾರೆ.
• ಶಾಲಾ-ಕಾಲೇಜುಗಳನ್ನು ಸಂಪೂರ್ಣವಾಗಿ ಆರಂಭಿಸಲು ಟ್ರಂಪ್ ಒಲವು ಹೊಂದಿದ್ದಾರೆ.
• ಕಾಲೇಜುಗಳ ಕ್ಯಾಂಪಸ್ಗಳಲ್ಲಿ ಎಡಪಂಥೀಯ ಮೂಲಭೂತವಾದದ ವಿಷವನ್ನು ಹರಡಲಾಗುತ್ತಿದ್ದು, ಅಂಥ ವಿಶ್ವವಿದ್ಯಾಲಯಗಳಿಗೆ ಸರ್ಕಾರದ ಎಲ್ಲ ನೆರವನ್ನು ನಿಲ್ಲಿಸುವುದಾಗಿ ಎಚ್ಚರಿಸಿದ್ದಾರೆ.
• ರಾಷ್ಟ್ರೀಯ ವಿಪತ್ತು ಸಂದರ್ಭದಲ್ಲಿರುವಂತೆ ಶಾಲಾ ಕಾಲೇಜುಗಳಿಗೆ ಫಡೆರಲ್ ಸರ್ಕಾರದಿಂದ ಹೆಚ್ಚುವರಿಯಾಗಿ ಹಣಕಾಸು ನೆರವು ನೀಡಬೇಕೆಂಬುದು ಬಿಡೆನ್ ನಿಲುವಾಗಿದೆ.
• ವಾರ್ಷಿಕವಾಗಿ 1 ಲಕ್ಷ 25 ಸಾವಿರ ಡಾಲರ್ಗಳಿಗಿಂತ ಕಡಿಮೆ ಆದಾಯ ಹೊಂದಿರುವ ಕುಟುಂಬದ ಮಕ್ಕಳಿಗೆ ಉನ್ನತ ಶಿಕ್ಷಣದಲ್ಲಿನ ಕಲಿಕಾ ಶುಲ್ಕವನ್ನು ಮನ್ನಾ ಮಾಡಬೇಕೆಂದು ಬಿಡೆನ್ ಒತ್ತಾಯಿಸಿದ್ದಾರೆ.
ಉನ್ನತ ಶಿಕ್ಷಣದ ಬಗ್ಗೆ ಟ್ರಂಪ್ ಅವರ ನಿಲುವುಗಳನ್ನು ನೋಡುವುದಾದರೆ, ಕಾಲೇಜು ಕ್ಯಾಂಪಸ್ಗಳಲ್ಲಿ ಮೂಲಭೂತವಾದಿ ಎಡಪಂಥೀಯ ವಿಚಾರಧಾರೆಯ ವಿಷವನ್ನು ಹರಡಲಾಗುತ್ತಿದೆ ಎಂದು ಅವರು ಆಗಾಗ ಪ್ರತಿಪಾದಿಸುತ್ತಿದ್ದಾರೆ. ಅಂಥ ಕಾಲೇಜುಗಳಿಗೆ ನೀಡಲಾಗುವ ಅನುದಾನವನ್ನು ನಿಲ್ಲಿಸಲಾಗುವುದು ಹಾಗೂ ಆ ಸಂಸ್ಥೆಗಳಿಗೆ ನೀಡಲಾಗಿರುವ ತೆರಿಗೆ ವಿನಾಯಿತಿ ಸೌಲಭ್ಯವನ್ನು ಸಹ ಹಿಂಪಡೆಯಲಾಗುವುದು ಎಂದು ಟ್ರಂಪ್ ಎಚ್ಚರಿಸಿದ್ದಾರೆ.
ದೇಶದಲ್ಲಿರುವ 3 ರಿಂದ 4 ವರ್ಷ ವಯೋಮಾನದ ಮಕ್ಕಳಿಗೆ ಸಾರ್ವತ್ರಿಕವಾಗಿ ಪ್ರಿ-ಕಿಂಡರಗಾರ್ಟನ್ ಶಾಲೆಯಲ್ಲಿ ಪ್ರವೇಶ ನೀತಿಯನ್ನು ಜಾರಿಗೆ ತರಬೇಕೆಂದು ಬಿಡೆನ್ ಹೇಳಿದ್ದಾರೆ. ಇನ್ನು ಶಿಕ್ಷಣದ ಹೆಸರಿನಲ್ಲಿ ಲಾಭ ಮಾಡಿಕೊಳ್ಳುತ್ತಿರುವ ಶಿಕ್ಷಣ ಸಂಸ್ಥೆಗಳಿಗೆ ತೆರಿಗೆದಾತರ ಹಣವನ್ನು ಖರ್ಚು ಮಾಡಲು ಬಿಡೆನ್ ವಿರೋಧ ವ್ಯಕ್ತಪಡಿಸಿದ್ದಾರೆ.
ಅಂದಿನ ಅಧ್ಯಕ್ಷ ಬರಾಕ್ ಒಬಾಮಾ ಅವರ ಆರೋಗ್ಯ ರಕ್ಷಣಾ ನೀತಿಯನ್ನು ಬದಲಾಯಿಸಿ ಎಲ್ಲರಿಗೂ ಆರೋಗ್ಯ ಎಂಬ ಹೊಸ ನೀತಿಯನ್ನು ತಾವು ಜಾರಿಗೆ ತರುವುದಾಗಿ ಟ್ರಂಪ್ ಅಧ್ಯಕ್ಷೀಯ ಅಭ್ಯರ್ಥಿಯಾಗಿದ್ದಾಗ ಹೇಳಿದ್ದರು. ಆದರೆ ಈ ನೀತಿ ಜಾರಿಯಾಗುವುದಕ್ಕಾಗಿ ಅಮೆರಿಕನ್ನರು ಇನ್ನೂ ಕಾಯುತ್ತಿರುವುದು ವಿಪರ್ಯಾಸವಾಗಿದ್ದು, ಇದೂ ಸಹ ಟ್ರಂಪ್ ಅವರಿಗೆ ಭಾರಿ ಹಿನ್ನಡೆ ಎಂದು ವಿಶ್ಲೇಷಿಸಲಾಗಿದೆ.
ಒಬಾಮಾ ಅವರ ಆರೋಗ್ಯ ವಿಮಾ ನೀತಿಯನ್ನು ಬದಲಾಯಿಸಿ ತಮ್ಮದೇ ಆದ ಎಲ್ಲರಿಗೂ ಆರೋಗ್ಯ ಎಂಬ ಹೊಸ ಆರೋಗ್ಯ ರಕ್ಷಣಾ ನೀತಿಯನ್ನು ಜಾರಿಗೆ ತರುವುದಾಗಿ ಟ್ರಂಪ್ ಹಿಂದಿನ ಚುನಾವಣೆಯ ಸಮಯದಲ್ಲಿ ಘೋಷಿಸಿದ್ದರು. ಆದರೆ ಇಂಥ ಯಾವುದೇ ಯೋಜನೆ ಈವರೆಗೂ ಜಾರಿಯಾಗದಿರುವುದು ಅಮೆರಿಕನ್ನರಿಗೆ ಭಾರಿ ನಿರಾಸೆ ಮೂಡಿಸಿದೆ. ದೇಶದ ಎಲ್ಲರಿಗೂ ಆರೋಗ್ಯ ಸೇವೆಗಳು ದೊರಕುವಂತೆ ಒಬಾಮಾ ಅವರ ಆರೋಗ್ಯ ನೀತಿಯಲ್ಲಿ ಬದಲಾವಣೆ ತರಬೇಕೆಂಬುದು ಬಿಡೆನ್ ನಿಲುವಾಗಿದೆ. ಸರ್ಕಾರದಿಂದ ಜಾರಿಯಾಗುವ ಆರೋಗ್ಯ ವಿಮೆಯು ಖಾಸಗಿ ಆರೋಗ್ಯ ವಿಮಾ ಕಂಪನಿಗಳಿಗೆ ಪೈಪೋಟಿ ನೀಡುವಂತಾಗಬೇಕು ಹಾಗೂ ಇಂಥದೊಂದು ಯೋಜನೆಯಿಂದ ದೇಶಕ್ಕೆ 10 ವರ್ಷಗಳಲ್ಲಿ 750 ಬಿಲಿಯನ್ ಡಾಲರ್ ಖರ್ಚಾಗಬಹುದು ಎಂದು ಬಿಡೆನ್ ಪ್ರತಿಪಾದಿಸಿದ್ದಾರೆ.
ದಿಢೀರ್ ಎಂದು ಎದುರಾಗುವ ಆರೋಗ್ಯ ಸಮಸ್ಯೆಯ ಬಿಲ್ ಪಾವತಿಗಳ ಪದ್ಧತಿಯನ್ನು ಕೈಬಿಟ್ಟ ಟ್ರಂಪ್, ಇಂಥ ಎಲ್ಲ ಆರೋಗ್ಯ ಸಮಸ್ಯೆಗಳನ್ನು ಪೂರ್ವದಲ್ಲಿ ಇದ್ದ ಅನಾರೋಗ್ಯ ಪಟ್ಟಿಯಲ್ಲಿ ಸೇರಿಸುವ ಮೂಲಕ ವಿಮಾ ರಕ್ಷಣೆ ದೊರಕುವಂತೆ ಮಾಡಿದರು.
ಒಬಾಮಾ ಅವರ ಸಮಯದಲ್ಲಿ ಜಾರಿಗೆ ತರಲಾಗಿದ್ದ ಆರೋಗ್ಯ ವಿಮಾ ರಕ್ಷಣೆಯನ್ನೇ ಮತ್ತಷ್ಟು ವಿಸ್ತರಿಸಿ ಮೆಡಿಕೇರ್ ರೀತಿಯಲ್ಲಿ ಸಾರ್ವತ್ರಿಕವಾಗಿ ಎಲ್ಲರಿಗೂ ಆರೋಗ್ಯ ರಕ್ಷಣೆಯ ವಿಮೆ ಸಿಗುವಂತೆ ಮಾಡುವುದು ಬಿಡೆನ್ ಉದ್ದೇಶವಾಗಿದೆ. ಇದಕ್ಕಾಗಿ ದೇಶವು ಮುಂದಿನ ೧೦ ವರ್ಷಗಳಲ್ಲಿ ೭೫೦ ಬಿಲಿಯನ್ ಡಾಲರ್ನಷ್ಟು ಹಣವನ್ನು ಖರ್ಚು ಮಾಡಬೇಕಾಗಿ ಬರಬಹುದು ಎಂಬುದು ಬಿಡೆನ್ ಲೆಕ್ಕಾಚಾರವಾಗಿದೆ. ಸಾರ್ವತ್ರಿಕವಾಗಿ ಆರೋಗ್ಯ ರಕ್ಷಣೆ ನೀಡುವ ತಮ್ಮ ಯೋಜನೆಗೆ ಅಮೆರಿಕ ಸಂಸತ್ನಲ್ಲಿ ಸುಲಭವಾಗಿ ಅನುಮೋದನೆ ದೊರಕಬಹುದು ಎಂಬುದು ಬಿಡೆನ್ ನಿರೀಕ್ಷೆಯಾಗಿದೆ.
ಆರೋಗ್ಯ ರಕ್ಷಣಾ ನೀತಿ ವಿಷಯದಲ್ಲಿ ವಿಚಾರಣೆ ನಡೆಸುವ ಸುಪ್ರೀಂ ಕೋರ್ಟ್ ಪೀಠದಲ್ಲಿ ಖಾಲಿ ಇರುವ ನ್ಯಾಯಾಧೀಶರ ಹುದ್ದೆಯನ್ನು ಕೂಡಲೇ ತುಂಬಬೇಕೆಂಬುದು ಬಿಡೆನ್ ಆಗ್ರಹವಾಗಿದೆ.
ಅಮೆರಿಕ ಫಸ್ಟ್ ಎಂಬುದು ಟ್ರಂಪ್ ನೀತಿ:
ಅಧ್ಯಕ್ಷ ಟ್ರಂಪ್ ತಮ್ಮ ಮೊದಲ ಅಧಿಕಾರಾವಧಿಯಲ್ಲಿ ಅಮೆರಿಕ ಫಸ್ಟ್ ಎನ್ನುವ ನಿಲುವಿನ ಮೇಲೆಯೇ ಸರ್ಕಾರದ ನೀತಿ ನಿಯಮಗಳನ್ನು ರೂಪಿಸಿದ್ದಾರೆ. ಆದರೆ ಈಗ ಚುನಾವಣಾ ಪ್ರಚಾರದ ಕೊನೆಯ ಹಂತದಲ್ಲಿ ಟ್ರಂಪ್ ತಮ್ಮನ್ನು ತಾವು ವಿಶ್ವದ ಶಾಂತಿದೂತ ಎಂದು ಬಿಂಬಿಸಿಕೊಳ್ಳಲು ಹೊರಟಿದ್ದು ಸ್ಪಷ್ಟ. ಗಲ್ಫ್ ರಾಷ್ಟ್ರಗಳಾದ ಬಹ್ರೇನ್ ಮತ್ತು ಯುಎಇ ಗಳು ತಮ್ಮ ಬದ್ಧವೈರಿ ಇಸ್ರೇಲ್ನೊಂದಿಗೆ ಶಾಂತಿ ಒಪ್ಪಂದ ಮಾಡಿಕೊಳ್ಳಲು ತಾವೇ ಕಾರಣ ಎಂದು ಟ್ರಂಪ್ ಬಿಂಬಿಸಿದ್ದಾರೆ.
ವಿದೇಶಾಂಗ ನೀತಿ: ಅಮೆರಿಕ ಫಸ್ಟ್
ಅಧ್ಯಕ್ಷ ಟ್ರಂಪ್ ತಮ್ಮ ಮೊದಲ ಅಧಿಕಾರಾವಧಿಯಲ್ಲಿ ಅಮೆರಿಕ ಫಸ್ಟ್ ಎನ್ನುವ ನಿಲುವಿನ ಮೇಲೆಯೇ ಸರ್ಕಾರದ ನೀತಿ ನಿಯಮಗಳನ್ನು ರೂಪಿಸಿದ್ದಾರೆ. ಚುನಾವಣಾ ಪ್ರಚಾರದ ಕೊನೆಯ ಹಂತದಲ್ಲಿ ಟ್ರಂಪ್ ತಮ್ಮನ್ನು ತಾವು ವಿಶ್ವದ ಶಾಂತಿದೂತ ಎಂದು ಬಿಂಬಿಸಿಕೊಳ್ಳಲು ಹೊರಟಿದ್ದು ಸ್ಪಷ್ಟ. ಅಮೆರಿಕ ಹಾಗೂ ಮೆಕ್ಸಿಕೊ ಗಡಿಯಲ್ಲಿ ೨೦೦ ಮೈಲುದ್ದದ ಬೇಲಿ ತಡೆಗೋಡೆಯನ್ನು ಕಟ್ಟಿಸಿದ್ದು ಕೂಡ ತಮ್ಮ ಅಧಿಕಾರಾವಧಿಯ ಮಹತ್ಸಾಧನೆ ಎಂದು ಟ್ರಂಪ್ ಹೇಳುತ್ತಾರೆ. ಪ್ಯಾರಿಸ್ ಹವಾಮಾನ ಒಪ್ಪಂದದಿಂದ ತಾವು ಹಿಂದೆ ಸರಿಯುವ ಇಂಗಿತವನ್ನು ಟ್ರಂಪ್ ವ್ಯಕ್ತಪಡಿಸಿದ್ದಾರೆ. ಅಫ್ಘಾನಿಸ್ತಾನದೊಂದಿಗೆ ಮಾಡಿಕೊಂಡಿರುವ ಶಾಂತಿ ಒಪ್ಪಂದದನ್ವಯ ಈ ಮುನ್ನ ನಿರ್ಧರಿಸಿದ್ದಕ್ಕಿಂತ ಮೊದಲೇ ಅಮೆರಿಕದ ಸೇನೆಯನ್ನು ವಾಪಸ್ ಕರೆಸಿಕೊಳ್ಳುವುದಾಗಿ ಟ್ರಂಪ್ ತಿಳಿಸಿದ್ದಾರೆ. ಸದ್ಯ ೪೫೦೦ ರಷ್ಟು ಅಮೆರಿಕ ಸೈನಿಕರು ಅಫ್ಘಾನಿಸ್ತಾನದಲ್ಲಿದ್ದು, ವರ್ಷಾಂತ್ಯದೊಳಗೆ ಎಲ್ಲರನ್ನೂ ದೇಶಕ್ಕೆ ವಾಪಸ್ ಕರೆಸಿಕೊಳ್ಳುವ ಯೋಜನೆಯನ್ನು ಟ್ರಂಪ್ ಹೊಂದಿದ್ದಾರೆ.
ನಾರ್ತ್ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರನ್ನು ಟ್ರಂಪ್ ಮೂರು ಬಾರಿ ಭೇಟಿ ಮಾಡಿದ್ದು ಪ್ರಮಾದದ ಕ್ರಮವಾಗಿದ್ದು, ಅಣು ಸಿಡಿತಲೆಗಳನ್ನು ಅಭಿವೃದ್ಧಿಪಡಿಸುತ್ತಿರುವ ಕಿಮ್ ಅವರಿಗೆ ಸುಖಾಸುಮ್ಮನೆ ಜಾಗತಿಕ ಮನ್ನಣೆ ದೊರಕಿಸಿಕೊಟ್ಟಂತಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.