ಲಂಡನ್(ಬ್ರಿಟನ್): ಕೊರೊನಾ ವೈರಸ್ ಮೂಲದ ಬಗ್ಗೆ ಸಂಶೋಧನೆ ನಡೆಸಲು ಚೀನಾಗೆ ತೆರಳಿದ್ದ ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡದ ಸಂಶೋಧನೆ ಅಂತ್ಯಗೊಂಡಿದ್ದು, ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ, ಆದಷ್ಟು ಬೇಗ ವೈರಸ್ ರಹಸ್ಯವನ್ನು ಪತ್ತೆ ಹಚ್ಚುವ ಅವಕಾಶವೊಂದು ಮುಚ್ಚಲಿದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.
ನೇಚರ್ ಜರ್ನಲ್‌ನಲ್ಲಿ ಪ್ರಕಟವಾದ ವರದಿಯಲ್ಲಿ ಚೀನಾದ ಅಧಿಕಾರಿಗಳು ಮೂಲ ಮಾಹಿತಿಯನ್ನು (ಕಚ್ಚಾ ಮಾಹಿತಿ) ಹಂಚಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಈ ವೇಳೆ ತುರ್ತು ಸಹಯೋಗದ ಅಗತ್ಯವಿದೆ. ಆದರೆ ಚೀನಾ ಕಚ್ಚಾ ಮಾಹಿತಿ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಸಂಶೋಧನೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ವಿಜ್ಞಾನಿಗಳು ಸ್ಪಷ್ಟನೆ ನೀಡಿದ್ದಾರೆ.
ಈ ವರ್ಷದ ಆರಂಭದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರ ತಂಡವನ್ನು ಚೀನಾದ ವುಹಾನ್ಗೆ ಕಳುಹಿಸಲಾಯಿತು. 2019ರ ಡಿಸೆಂಬರ್‌ನಲ್ಲಿ ವುಹಾನ್ನಲ್ಲಿ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದ್ದವು. ಇದರಿಂದಾಗಿ ಅಲ್ಲಿಯೇ ಸಂಶೋಧನೆ ನಡೆಸಲು ವಿಜ್ಞಾನಿಗಳು ತೆರಳಿದ್ದರು.
ಮಾರ್ಚ್‌ನಲ್ಲಿ ಈ ಕುರಿತು ವಿಜ್ಞಾನಿಗಳ ತಂಡವು ವೈರಸ್ ಬಹುಶಃ ಪ್ರಾಣಿಗಳಿಂದ ಮನುಷ್ಯರಿಗೆ ಹರಡಿದೆ ಎಂಬ ನಿರ್ಧಾರಕ್ಕೆ ಬಂದಿತ್ತು. ಪ್ರಯೋಗಾಲಯದಿಂದ ವೈರಸ್ ಸೋರಿಕೆ ಆಗಿರುವ ಸಾಧ್ಯತೆ ಅತ್ಯಂತ ಕಡಿಮೆ ಎಂದೂ ವಿಜ್ಞಾನಿಗಳು ಹೇಳಿದ್ದರು.
ಚೀನಾ ಹೇಳುವುದೇನು?
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಚೀನಾದ ವಿದೇಶಾಂಗ ಸಚಿವಾಲಯದ ಮುಖ್ಯಸ್ಥ ಫು ಕಾಂಗ್, ಕೋವಿಡ್ ವೈರಸ್ನ ಮೂಲದ ಬಗ್ಗೆ ಹುಡುಕಾಟವು ಸ್ಥಗಿತಗೊಂಡಿದೆ. ಇದು ಚೀನಾದ ತಪ್ಪಲ್ಲ. ಕೋವಿಡ್ ವೈರಸ್ನ ಮೂಲವನ್ನು ಪತ್ತೆ ಹಚ್ಚುವುದನ್ನು ಚೀನಾ ಯಾವಾಗಲೂ ಬೆಂಬಲಿಸುತ್ತದೆ. ಅಮೆರಿಕ 'ಲ್ಯಾಬ್ ಸೋರಿಕೆ ಸಿದ್ಧಾಂತ' ಪ್ರಚೋದಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ರಚಿಸಿದ್ದ ಗುಪ್ತಚರ ಇಲಾಖೆ ವಿಜ್ಞಾನಿಗಳೂ ವೈರಸ್ ಪ್ರಾಣಿಯಿಂದ ಮನುಷ್ಯನಿಗೆ ಹರಡಿದೆ ಅಥವಾ ಚೀನಾದ ಪ್ರಯೋಗಾಲಯದಿಂದ ಆಕಸ್ಮಿಕವಾಗಿ ಹೊರಬಂದಿದೆ ಎಂದು ವರದಿ ನೀಡಿದ್ದು, ಇನ್ನೂ ವೈರಸ್ ಮೂಲದ ಬಗ್ಗೆ ಖಚಿತವಾಗಿಲ್ಲ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ಇದನ್ನೂ ಓದಿ: ಟಾಲಿವುಡ್ ಡ್ರಗ್ಸ್ ಕೇಸ್: ರಾಣಾ ದಗ್ಗುಬಾಟಿ, ರಾಕುಲ್ ಪ್ರೀತ್ ಸಿಂಗ್ ಸೇರಿ 12 ಸೆಲಿಬ್ರಿಟಿಗಳಿಗೆ ಸಮನ್ಸ್