ವಾಷಿಂಗ್ಟನ್: ಇಲ್ಲಿರುವ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಯನ್ನು ಅಪರಿಚಿತ ದುಷ್ಕರ್ಮಿಗಳು ವಿರೂಪಗೊಳಿಸಿದ್ದು, ನಾಚಿಕೆಗೇಡಿನ ಸಂಗತಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಕಪ್ಪು ವರ್ಣೀಯ ಅಮೆರಿಕ ಪ್ರಜೆ ಜಾರ್ಜ್ ಫ್ಲಾಯ್ಡ್ ಅವರ ಸಾವಿನ ನಂತರ ಅಮೆರಿಕದಾದ್ಯಂತ ಹುಟ್ಟಿಕೊಂಡ ಪ್ರತಿಭಟನೆ ಹಾಗೂ ಹಿಂಸಾಚಾರದ ವೇಳೆ, ಕೆಲ ದಿನಗಳ ಹಿಂದೆ ದುಷ್ಕರ್ಮಿಗಳು ಮಹಾತ್ಮ ಗಾಂಧೀಜಿ ಅವರ ಪ್ರತಿಮೆಗೆ ಬಣ್ಣ ಸುರಿದು ವಿರೂಪಗೊಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಘಟನೆಯ ಕುರಿತು ಸೋಮವಾರ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅಧ್ಯಕ್ಷ ಟ್ರಂಪ್ "ಇದೊಂದು ನಾಚಿಕೆಗೇಡಿನ ಸಂಗತಿ" ಎಂದಿದ್ದಾರೆ. ವಾಷಿಂಗ್ಟನ್ನಲ್ಲಿನ ಭಾರತೀಯ ರಾಯಭಾರ ಕಚೇರಿ ರಸ್ತೆಯಲ್ಲಿರುವ ಗಾಂಧಿ ಪ್ರತಿಮೆಗೆ ಅವಮಾನಿಸಿದ್ದನ್ನು ಗಂಭೀರವಾಗಿ ಪರಿಗಣಿಸಿದ್ದ ಭಾರತೀಯ ರಾಯಭಾರ ಕಚೇರಿ, ಘಟನೆಯ ಕುರಿತು ಸಮಗ್ರ ತನಿಖೆ ನಡೆಸುವಂತೆ ಅಮೆರಿಕದ ರಕ್ಷಣಾ ಇಲಾಖೆ ಹಾಗೂ ಮೆಟ್ರೊಪಾಲಿಟನ್ ಪೊಲೀಸ್ ಮತ್ತು ನ್ಯಾಷನಲ್ ಪಾರ್ಕ್ ಸರ್ವಿಸ್ ಇಲಾಖೆಗೆ ಆಗ್ರಹಿಸಿತ್ತು.
ಕಳೆದ ಫೆಬ್ರವರಿಯಲ್ಲಿ ಟ್ರಂಪ್ ದಂಪತಿ ಭಾರತಕ್ಕೆ ಭೇಟಿ ನೀಡಿದ ವೇಳೆ, ಟ್ರಂಪ್ ಪತ್ನಿ ಮೆಲಾನಿಯಾ ಟ್ರಂಪ್ ಅಹಮದಾಬಾದ್ನ ಗಾಂಧಿ ಆಶ್ರಮಕ್ಕೆ ತೆರಳಿ ಸಾಕಷ್ಟು ಹೊತ್ತು ಅಲ್ಲಿ ಕಳೆದಿದ್ದರು. ಭಾರತದ ಪ್ರಧಾನಿ ನರೇಂದ್ರ ಮೋದಿ ಖುದ್ದಾಗಿ ಹಾಜರಿದ್ದು ಮೆಲಾನಿಯಾ ಟ್ರಂಪ್ ಅವರಿಗೆ ಗಾಂಧಿ ಆಶ್ರಮದ ಕುರಿತು ಸಾಕಷ್ಟು ಮಾಹಿತಿ ನೀಡಿದ್ದರು.