ಸ್ಯಾಂಟಿಯಾಗೊ (ಚಿಲಿ): ಚೀನಾದ ಕೋವಿಡ್ ಲಸಿಕೆಗಳ ಮೇಲೆ ಅವಲಂಬಿತರಾಗಿದ್ದ ಚಿಲಿ, ಸೀಚೆಲ್ಸ್, ಮಂಗೋಲಿಯಾ ಮತ್ತು ಬಹ್ರೇನ್ ರಾಷ್ಟ್ರಗಳಲ್ಲಿ ಬಹುಪಾಲು ಜನರಿಗೆ ವ್ಯಾಕ್ಸಿನ್ ನೀಡಿದ ಬಳಿಕವೂ ಮತ್ತೆ ಸಾಂಕ್ರಾಮಿಕ ಉಲ್ಬಣಿಸಿರುವುದು ವರದಿಯಾಗಿದೆ.
ಇತ್ತೀಚಿನ ತಿಂಗಳುಗಳಲ್ಲಿ ಈ ನಾಲ್ಕು ದೇಶಗಳಿಗೆ ಚೀನಾ ಒದಗಿಸಿದ ಕೋವಿಡ್ ಲಸಿಕೆಯ ಲಕ್ಷಾಂತರ ಡೋಸ್ಗಳು ಸೋಂಕಿನ ವಿರುದ್ಧ, ವಿಶೇಷವಾಗಿ ಹೊಸ ರೂಪಾಂತರಗಳ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಿಲ್ಲದೇ ಇರುವುದೇ ಕೊರೊನಾ ಉಲ್ಬಣದ ಪ್ರಮುಖ ಕಾರಣಗಳಲ್ಲೊಂದು. ಮೊದಲ ಡೋಸ್ ಪಡೆದ ಅನೇಕರು ಸೋಂಕಿಗೆ ತುತ್ತಾಗುತ್ತಿದ್ದಾರೆ. ಚೀನಾ ತನ್ನ ಲಸಿಕೆಗಳ ಪರಿಣಾಮಕಾರಿತ್ವದ ಕುರಿತು ಸರಿಯಾದ ಮಾಹಿತಿ ಹಂಚಿಕೊಂಡಿಲ್ಲ ಎಂದು ಕೆಲವು ತಜ್ಞರು ಹೇಳಿದ್ದಾರೆ.
ಸಿನೋವಾಕ್ - ಸಿನೊಫಾರ್ಮ್
ದೇಶೀಯವಾಗಿ ಅಭಿವೃದ್ಧಿಪಡಿಸಿದ ಏಳು ಲಸಿಕೆಗಳನ್ನು ಚೀನಾ ಅನುಮೋದಿಸಿದೆ. ಇವುಗಳಲ್ಲಿ ಪ್ರಪಂಚದಾದ್ಯಂತ ವ್ಯಾಪಕವಾಗಿ ಲಭ್ಯವಿರುವ ಸಿನೋವಾಕ್ ಮತ್ತು ಸಿನೊಫಾರ್ಮ್ ಸಂಸ್ಥೆ ಅಭಿವೃದ್ಧಿಪಡಿಸಿದ ಲಸಿಕೆಗಳಿಗೆ ವಿಶ್ವ ಆರೋಗ್ಯ ಸಂಸ್ಥೆ(WHO) ತುರ್ತು ಬಳಕೆಗೆ ಅನುಮೋದನೆ ನೀಡಿದೆ. ಸಿನೋವಾಕ್‌ನ ಕೊರೊನಾವಾಕ್ ಲಸಿಕೆಯು ಶೇ.51ರಷ್ಟು ಹಾಗೂ ಸಿನೊಫಾರ್ಮ್ ಲಸಿಕೆಯು ಶೇ.79ರಷ್ಟು ಮಾತ್ರ ಪರಿಣಾಮಕಾರಿತ್ವವನ್ನು ಹೊಂದಿದೆ. ಆದರೆ ಫೈಜರ್, ಮಾಡರ್ನಾ, ಸ್ಪುಟ್ನಿಕ್ ಲಸಿಕೆಗಳು ಕ್ಲಿನಿಕಲ್ ಪ್ರಯೋಗಗಳಲ್ಲಿ ಶೇ.90ಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾಗಿದೆ.
ಚೀನಾದ ಲಸಿಕೆಗಳನ್ನು ಹೆಚ್ಚಾಗಿ ಅವಲಂಬಿಸಿರುವ ಮಂಗೋಲಿಯಾದಲ್ಲಿ ಭಾನುವಾರದಿಂದ ಸುಮಾರು 2,400 ಹೊಸ ಪ್ರಕರಣಗಳು ವರದಿಯಾಗುತ್ತಿದ್ದು, ಇದು ಒಂದು ತಿಂಗಳ ಹಿಂದಿನಿಂದ ನಾಲ್ಕು ಪಟ್ಟು ಹೆಚ್ಚಾಗಿದೆ. ಮಂಗೋಲಿಯಾ ಜನಸಂಖ್ಯೆಯ ಶೇ. 58.7 ಜನರಿಗೆ ಕನಿಷ್ಠ ಒಂದು ಡೋಸ್ ವ್ಯಾಕ್ಸಿನ್ ನೀಡಲಾಗಿದೆ.
ಸೀಚೆಲ್ಸ್‌ನಲ್ಲಿ ಸಿನೊಫಾರ್ಮ್ ಲಸಿಕೆಯನ್ನು ಜನರಿಗೆ ನೀಡಲಾಗುತ್ತಿದ್ದು, ಶೇ.72ರಷ್ಟು ಜನಸಂಖ್ಯೆ ಲಸಿಕೆಯ ಮೊದಲ ಡೋಸ್ ಹಾಕಿಸಿಕೊಂಡಿದ್ದಾರೆ. ಆದರೆ ಪ್ರತಿದಿನ ಒಂದು ಮಿಲಿಯನ್ ಜನಸಂಖ್ಯೆಗೆ 716ಕ್ಕೂ ಹೆಚ್ಚು ಕೋವಿಡ್ ಕೇಸ್ಗಳು ವರದಿಯಾಗುತ್ತಿದೆ.
ಚಿಲಿಯಲ್ಲಿ ವೈರಸ್ ಉಲ್ಬಣವು ಆಸ್ಪತ್ರೆಗಳಲ್ಲಿ ಭೀಕರ ಪರಿಸ್ಥಿತಿ ತಂದಿಡ್ಡಿದೆ. ಜೂನ್ ಅಂತ್ಯದಲ್ಲಿ ಮತ್ತೆ ಗಡಿ ನಿರ್ಬಂಧ ಹೇರಲು ಸರ್ಕಾರ ಮುಂದಾಗಿದೆ. ಬಹ್ರೇನ್ನಲ್ಲಿ ಅರ್ಧದಷ್ಟು ಜನಸಂಖ್ಯೆಯು ಸಿನೊಫಾರ್ಮ್ನ ಎರಡೂ ಡೋಸ್ಗಳನ್ನು ಪಡೆದಿದ್ದಾರೆ. ಆದರೆ ಸೋಂಕು ಹೆಚ್ಚಾದ ಕಾರಣ ಮತ್ತೆ ಈಗ ಮೂರನೇ ಡೋಸ್ ನೀಡಲಾಗುತ್ತಿದೆ.
ಲಸಿಕೆಗಳ ಸಮರ್ಥನೆ
ಆದಾಗ್ಯೂ ನಾಲ್ಕು ದೇಶಗಳ ಅಧಿಕಾರಿಗಳು ಪ್ರಕರಣಗಳ ಹೆಚ್ಚಳಕ್ಕೆ ಇತರ ಕಾರಣಗಳಿರಬಹುದು ಎಂದು ಹೇಳುತ್ತಾರೆ. ಲಸಿಕೆಗಳು ತೀವ್ರ ಅನಾರೋಗ್ಯ ಮತ್ತು ಮರಣ ಪ್ರಮಾಣವನ್ನು ತಡೆಯುತ್ತದೆ. ಶೀಘ್ರವಾಗಿ ನಿರ್ಬಂಧಗಳನ್ನು ಸಡಿಲಿಸಿರುವುದು ಕೋವಿಡ್ ಮತ್ತೆ ಆರ್ಭಟಿಸಲು ಕಾರಣವಿರಬಹುದೆಂದು ಹೇಳಿ ಲಸಿಕೆಗಳನ್ನು ಸಮರ್ಥಿಸಿಕೊಂಡಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಚೀನಾ ವಿದೇಶಾಂಗ ಸಚಿವಾಲಯ, ಈ ದೇಶಗಳಲ್ಲಿ ಏಕಾಏಕಿ ಕೊರೊನಾ ಹೆಚ್ಚಾಗಲು ಹಾಗೂ ನಮ್ಮ ಲಸಿಕೆಗಳ ನಡುವೆ ಯಾವುದೇ ನೇರ ಸಂಬಂಧವಿಲ್ಲ ಎಂದು ಹೇಳಿದೆ.