ವಾಷಿಂಗ್ಟನ್(ಅಮೆರಿಕ): ತೈವಾನ್, ಹಾಂಕಾಂಗ್, ಕ್ಸಿನ್ಜಿಯಾಂಗ್ ವಿಚಾರದಲ್ಲಿ ಅಮೆರಿಕ ಮಧ್ಯಪ್ರವೇಶ ಮಾಡಬಾರದು ಎಂದು ಚೀನಾದ ಹಿರಿಯ ರಾಜತಾಂತ್ರಿಕ ಅಧಿಕಾರಿ ಯಾಂಗ್ ಜಿಚಿ ಅಮೆರಿಕವನ್ನು ಒತ್ತಾಯಿಸಿದ್ದಾರೆ ಎಂದು ಚೀನಾದ ಮಾಧ್ಯಮವೊಂದು ವರದಿ ಮಾಡಿದೆ.
ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾ (ಸಿಪಿಸಿ) ಕೇಂದ್ರ ಸಮಿತಿಯ ರಾಜಕೀಯ ಬ್ಯೂರೋದ ಸದಸ್ಯರಾದ ಯಾಂಗ್ ಮತ್ತು ಅಮೆರಿಕ ರಾಜತಾಂತ್ರಿಕ ಅಧಿಕಾರಿ ಸುಲ್ಲಿವನ್ ಅವರೊಂದಿಗೆ ಸಭೆ ನಡೆಸಿದ್ದು, ಈ ಸಭೆಯಲ್ಲಿ ಚೀನಾ ಅಮೆರಿಕಕ್ಕೆ ಈ ರೀತಿಯಾಗಿ ಒತ್ತಾಯಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಸಭೆಯಲ್ಲಿ, ಎರಡೂ ದೇಶಗಳ ಮಧ್ಯೆ ಭಿನ್ನಾಭಿಪ್ರಾಯಗಳನ್ನು ತೊಡೆದುಹಾಕಲು, ಪರಸ್ಪರ ಲಾಭ ಪಡೆಯುವ ಸಲುವಾಗಿ ಕಾರ್ಯ ನೀತಿಯನ್ನು ಜಾರಿಗೊಳಿಸಲು ಎರಡೂ ರಾಷ್ಟ್ರಗಳು ಒಪ್ಪಿಕೊಂಡಿವೆ ಎಂದು ವರದಿಯಲ್ಲಿ ಹೇಳಲಾಗಿದೆ.
ಗ್ಲೋಬಲ್ ಟೈಮ್ಸ್ ಪ್ರಕಾರ, ಸಭೆಯಲ್ಲಿ ತೈವಾನ್, ಹಾಂಗ್ ಕಾಂಗ್, ಕ್ಸಿನ್ಜಿಯಾಂಗ್, ಟಿಬೆಟ್ ಮತ್ತು ಮಾನವ ಹಕ್ಕುಗಳ ವಿಚಾರಕ್ಕೆ ಸಂಬಂಧಿಸಿದಂತೆ ಹಾಗೂ ಚೀನಾದ ಆರ್ಥಿಕ ವ್ಯವಹಾರಗಳಲ್ಲಿ ಅಮೆರಿಕ ಹಸ್ತಕ್ಷೇಪ ಮಾಡಬಾರದು ಎಂದು ಯಾಂಗ್ ಜಿಚಿ ಒತ್ತಾಯಿಸಿದ್ದಾರೆ.
ಈ ಕುರಿತು ನಿಮ್ಮೊಂದಿಗೆ ನಿಕಟ ಸಂಪರ್ಕ ಹೊಂದುತ್ತೇವೆ. ಎರಡೂ ದೇಶಗಳ ನಡುವೆ ಜವಾಬ್ದಾರಿಯುತ ಸ್ಪರ್ಧೆಯನ್ನು ಖಚಿತಪಡಿಸಿಕೊಳ್ಳುತ್ತೇವೆ. ಉನ್ನತ ಮಟ್ಟದಲ್ಲಿ ನಾವು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಜೊತೆಗೆ ಸಂಪರ್ಕ ಹೊಂದಿರುತ್ತೇವೆ ಎಂದು ಸುಲ್ಲಿವಾನ್ ಹೇಳಿದ್ದಾರೆ ಎಂದು ಶ್ವೇತ ಭವನ ಹೇಳಿದೆ.
ಕ್ಸಿನ್ಜಿಯಾಂಗ್, ಹಾಂಕಾಂಗ್ ಮತ್ತು ತೈವಾನ್ನಲ್ಲಿನ ಹಕ್ಕುಗಳ ಉಲ್ಲಂಘನೆಯ ಸಮಸ್ಯೆಗಳನ್ನು ಅಮೆರಿಕ ಅಂತಾರಾಷ್ಟ್ರೀಯ ಮಟ್ಟದ ಹಲವಾರು ವೇದಿಕೆಗಳಲ್ಲಿ ಪ್ರಸ್ತಾಪಿಸಿದ್ದು, ಇದರಿಂದ ಉಭಯ ರಾಷ್ಟ್ರಗಳ ಸಂಬಂಧ ಹದಗೆಟ್ಟಿತ್ತು.
ಇದನ್ನೂ ಓದಿ: ವರ್ಷಾಂತ್ಯದ ವೇಳೆಗೆ ಚೀನಾ-ಅಮೆರಿಕ ಮಹತ್ವದ ಮಾತುಕತೆ: ವರದಿ