ಒಟ್ಟಾವಾ : ಪ್ರತಿಪಕ್ಷ ಸಂಸದರ ನಿರ್ಣಯ ಮಂಡನೆಯ ಬಳಿಕ ಕೆನಡಾದ ಹೌಸ್ ಆಫ್ ಕಾಮನ್ಸ್ ಅಥವಾ ಸಂಸತ್ತಿನ ಕೆಳಮನೆ ಜಸ್ಟಿನ್ ಟ್ರುಡೊ ನೇತೃತ್ವದ ಸರ್ಕಾರವು ದೇಶದಲ್ಲಿ ಕೊರೊನಾ ವೈರಸ್ ಪರಿಸ್ಥಿತಿಯನ್ನು ಯಾವ ರೀತಿ ನಿಭಾಯಿಸುತ್ತಿದೆ ಎಂಬುವುದರ ಬಗ್ಗೆ ತನಿಖೆ ನಡೆಸಲು ಮುಂದಾಗಿದೆ.
ಪ್ರತಿಪಕ್ಷ ಕನ್ಸರ್ವೇಟಿವ್ ಪಕ್ಷದ ಸಂಸದರು ಮಂಡಿಸಿದ ನಿರ್ಣಯವು 152 ರಿಂದ 176 ಮತಗಳಿಂದ ಸಂಸತ್ತಿನಲ್ಲಿ ಅಂಗೀಕರಿಸಲ್ಪಟ್ಟಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಕನ್ಸರ್ವೇಟಿವ್, ಬ್ಲಾಕ್ ಕ್ವಿಬೆಕೊಯಿಸ್, ನ್ಯೂ ಡೆಮಾಕ್ರಟಿಕ್ ಪಾರ್ಟಿ ಮತ್ತು ಗ್ರೀನ್ ಪಾರ್ಟಿಯ ಸಂಸದರು ನಿರ್ಣಯದ ಪರ ಮತ ಚಲಾಯಿಸಿದರೆ, ಆಡಳಿತಾರೂಡ ಲಿಬರಲ್ ಪಕ್ಷದ ಸಂಸದರು ನಿರ್ಣಯದ ವಿರುದ್ಧ ಮತ ಚಲಾಯಿಸಿದ್ದಾರೆ.
ಕೊರೊನಾ ಸೋಂಕು ನಿಯಂತ್ರಿಸಲು ಕಳೆದ ಮಾರ್ಚ್ನಿಂದ ಪ್ರಧಾನಿ ಕಚೇರಿ, ಪ್ರಿವಿ ಕೌನ್ಸಿಲ್ ಕಚೇರಿ, ಸಾರ್ವಜನಿಕ ಆರೋಗ್ಯ ಸಂಸ್ಥೆ ಹೆಲ್ತ್ ಕೆನಡಾ, ಸಂಪುಟ ಸಚಿವರು ಬಳಸಿದ ಈ-ಮೇಲ್, ದಾಖಲೆಗಳು, ಟಿಪ್ಪಣಿಗಳು ಈ ತನಿಖೆಯ ಮೂಲಕ ಬಹಿರಂಗಗೊಳ್ಳಲಿದೆ.
ಪ್ರತಿಪಕ್ಷದ ನಿರ್ಣಯವು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಮತ್ತು ಭಾರೀ ಪರಿಣಾಮ ಬೀರಲಿದೆ. ನಿರ್ಣಯ ಅಂಗೀಕಾರಗೊಳ್ಳುವ ಮೊದಲು ಅನೇಕ ಕಂಪನಿಗಳು, ಉದ್ಯಮಿಗಳು ಮತ್ತು ಇತರ ತಜ್ಞರು ಇದರ ವಿರುದ್ಧ ಮಾತನಾಡಿದ್ದರು.