ಫೋನಿಕ್ಸ್( ಅಮೆರಿಕ): ಶುಕ್ರವಾರ ಗ್ರ್ಯಾಂಡ್ ಕ್ಯಾನ್ಯನ್‌ಗೆ ತೆರಳುತ್ತಿದ್ದ ಲಾಸ್ ವೇಗಾಸ್ ಮೂಲದ ಟೂರ್ ಬಸ್ ವಾಯುವ್ಯ ಆರಿಜೋನ್ನಲ್ಲಿ ಉರುಳಿ ಬಿದ್ದಿದ್ದು, ಘಟನೆಯಲ್ಲಿ ಒಬ್ಬರು ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಗೆ ಇನ್ನೂ ನಿಖರವಾದ ಕಾರಣ ತಿಳಿದು ಬಂದಿಲ್ಲ ಎಂದು ಮೊಹವೆ ಕೌಂಟಿ ಶೆರಿಫ್ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ ಅತೀ ವೇಗದ ಚಾಲನೆಯಿಂದ ಈ ಘಟನೆ ನಡೆದಿದ್ದು. ಸ್ಥಳದಲ್ಲಿ ಘಟನೆ ವೇಳೆ ಬೇರೆ ಯಾವುದೇ ವಾಹನಗಳು ಇಲ್ಲದೇ ಇದ್ದದರಿಂದ ದೊಡ್ಡ ಮಟ್ಟದ ಅನಾಹುತ ತಪ್ಪಿದೆ ಎಂದರು.
ಬಸ್ ಸಂಪೂರ್ಣ ಹಾನಿಗೊಳಗಾಗಿದ್ದು, ಬಸ್ನಲ್ಲಿದ್ದ ಪ್ರಯಾಣಿಕರೆಲ್ಲರೂ ಆಘಾತಕೊಳಗಾಗಿದ್ದಾರೆ. ಚಾಲಕನು ಹೆಚ್ಚಿನ ವೇಗದಲ್ಲಿ ವಾಹನ ಚಾಲನೆ ಮಾಡಿದ ಪರಿಣಾಮ ಈ ಘಟನೆ ಸಂಭವಿಸಿದೆ ಎಂದು ಬಸ್ನಲ್ಲಿದ್ದ ಸಾಕಷ್ಟು ಪ್ರಯಾಣಿಕು ಹೇಳಿದ್ದಾರೆ.
ಬಸ್ನಲ್ಲಿ ಚಾಲಕ ಸೇರಿ ಒಟ್ಟು 48 ಜನರಿದ್ದರು ಎನ್ನಲಾಗಿದೆ. ಘಟನೆ ನಂತರ 44 ಜನರನ್ನು ಕಿಂಗ್ಮನ್ ಪ್ರಾದೇಶಿಕ ವೈದ್ಯಕೀಯ ಕೇಂದ್ರಕ್ಕೆ ಕಳುಹಿಸಲಾಗಿದೆ, ಇದರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ವೈದ್ಯಕೀಯ ಹೆಲಿಕಾಪ್ಟರ್ ಮೂಲಕ ಆಸ್ಪತ್ರಗೆ ತೆರಳಿದ್ದಾರೆ, ಉಳಿದವರೆಲ್ಲರೂ ಸಣ್ಣಪುಟ್ಟ ಗಾಯಗಳಿಗೆ ಚಿಕಿತ್ಸೆ ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.