ವಾಷಿಂಗ್ಟನ್: ಉಕ್ರೇನ್ ಪೂರ್ವಭಾಗದಲ್ಲಿ ಬಂಡುಕೋರರ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ತನ್ನ ಸೇನೆಯನ್ನು ನಿಯೋಜಿಸಲು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಆದೇಶಿಸಿದ ಬೆನ್ನಲ್ಲೆ ಅಮೆರಿಕ, ರಷ್ಯಾದ ಮೇಲೆ ಆರ್ಥಿಕ ನಿರ್ಬಂಧಗಳನ್ನು ವಿಧಿಸಿದೆ.
ಮೊದಲ ಭಾಗವಾಗಿ ಹಲವಾರು ನಿರ್ಬಂಧಗಳನ್ನು ವಿಧಿಸಿದ ಬಗ್ಗೆ ಮಾಹಿತಿ ನೀಡಿದ ಜೋ ಬೈಡನ್, ರಷ್ಯಾವು ತನ್ನ ಸೇನೆಯನ್ನು ಉಕ್ರೇನ್ ಪ್ರದೇಶಗಳಿಗೆ ಕಳುಹಿಸಿಕೊಟ್ಟು, ಆ ದೇಶದ ಪ್ರದೇಶವನ್ನು ಆಕ್ರಮಣ ಮಾಡಿಕೊಂಡಿದೆ. ಇದು ಯುದ್ಧಕ್ಕೆ ಸರಿಸಮಾನವಾದುದು ಎಂದು ಆರೋಪಿಸಿದ್ದಾರೆ.
ಉಕ್ರೇನ್ ಪ್ರದೇಶಗಳಲ್ಲಿ ರಷ್ಯಾ ಸೇನೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಮುಂದಾಗಿದೆ. ಇದು ರಷ್ಯಾ ಅಂತಾರಾಷ್ಟ್ರೀಯ ಬದ್ಧತೆಗಳನ್ನು ಮೀರಿದ್ದರಿಂದ ಆ ದೇಶದ ಮೇಲೆ ಕೆಲ ನಿರ್ಬಂಧಗಳನ್ನು ಹೇರಲಾಗುವುದು ಎಂದು ಅವರು ತಿಳಿಸಿದ್ದಾರೆ.
ಇದಲ್ಲದೇ ರಷ್ಯಾ ಉಕ್ರೇನ್ ಮೇಲೆ ಯುದ್ಧ ಮುಂದುವರಿಸಿದ್ದೇ ಆದಲ್ಲಿ ಇನ್ನೂ ಹೆಚ್ಚಿನ ನಿರ್ಬಂಧಗಳನ್ನು ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ರಷ್ಯಾ ಮೇಲೆ ಏನೆಲ್ಲಾ ನಿರ್ಬಂಧಗಳು?
- ರಷ್ಯಾದ ಎರಡು ಬ್ಯಾಂಕ್ಗಳಾದ ವೆಬ್ ಮತ್ತು ಮಿಲಿಟರಿ ಬ್ಯಾಂಕ್ ಮೇಲೆ ಅಮೆರಿಕದಲ್ಲಿ ಕಾರ್ಯನಿರ್ವಹಣೆಗೆ ತಡೆ
- ಇನ್ನು ಮುಂದೆ ರಷ್ಯಾ, ಅಮೆರಿಕದಲ್ಲಿ ಹಣಕಾಸು ಹೂಡಿಕೆ ಮಾಡುವಂತಿಲ್ಲ
- ಅಮೆರಿಕ ಮತ್ತು ಯುರೋಪಿಯನ್ ಮಾರುಕಟ್ಟೆಗಳಲ್ಲಿ ರಷ್ಯಾ ವಹಿವಾಟಿಗೆ ತಡೆ
- ರಷ್ಯಾದಿಂದ ಬರುವ ಎಲ್ಲ ಗಣ್ಯರು, ಅವರ ಕುಟುಂಬಸ್ಥರಿಗೆ ಅಮೆರಿಕ ಪ್ರವೇಶ ನಿಷಿದ್ಧ
- ತಕ್ಷಣದಿಂದಲೇ ಜಾರಿಯಾಗುವಂತೆ ರಷ್ಯಾದ ಗಣ್ಯರು ಅಮೆರಿಕ ಪ್ರವೇಶ ನಿರ್ಬಂಧಿಸಿ ಆದೇಶ
- ರಷ್ಯಾದ ಜೊತೆ ಮಾಡಿಕೊಂಡಿದ್ದ ನಾರ್ಡ್ ಸ್ಟ್ರೀಮ್-2 ಒಪ್ಪಂದಕ್ಕೆ ತಡೆ
- ಜರ್ಮನಿ ಜೊತೆಗೆ ಈ ಒಪ್ಪಂದ ಮುಂದುವರಿಸಲು ಅಮೆರಿಕ ಇಂಗಿತ
ಇದನ್ನೂ ಓದಿ: 11 ವರ್ಷದ ಬಾಲಕನ ಚಿಕಿತ್ಸೆಗೆ 31 ಲಕ್ಷ ರೂ. ದೇಣಿಗೆ ನೀಡಿ ಹೃದಯವಂತಿಕೆ ಮೆರೆದ ಕೆ ಎಲ್ ರಾಹುಲ್