ಹೈದರಾಬಾದ್: ಕೊರೊನಾ ವೈರಸ್ ವಿರುದ್ಧ ಮಾನವನ ಹೋರಾಟ ದಿನದಿಂದ ದಿನಕ್ಕೆ ಬಿರುಸು ಪಡೆದುಕೊಳ್ಳುತ್ತಿದೆ. ಹೇಗಾದರೂ ಮಾಡಿ ಕೋವಿಡ್-19 ಹೆಮ್ಮಾರಿಯನ್ನು ಸೋಲಿಸಬೇಕೆಂದು ಜಗತ್ತಿನ ವಿಜ್ಞಾನಿಗಳು ಪಣತೊಟ್ಟು ಕೆಲಸ ಮಾಡುತ್ತಿದ್ದಾರೆ. ಈ ಮಧ್ಯೆ ಅಮೆರಿಕದ ಲಂಗ್ ಅಸೋಸಿಯೇಶನ್ (ಅಮೆರಿಕ ಶ್ವಾಸಕೋಶ ತಜ್ಞರ ಸಂಘ) ನಾಗರಿಕರನ್ನೇ 'ಸಿಟಿಜೆನ್ ಸೈಂಟಿಸ್ಟ್' ಗಳಾಗಿಸಿ ಅವರಿಂದ ಕೊರೊನಾ ಕುರಿತ ವಸ್ತುನಿಷ್ಠ ಮಾಹಿತಿ ಪಡೆದು ಸಂಶೋಧನೆ ಕೈಗೊಳ್ಳಲು ಮುಂದಾಗಿದೆ.
ನಾರ್ಥವೆಸ್ಟರ್ನ್ ಯುನಿವರ್ಸಿಟಿ ಹಾಗೂ ಸ್ಯಾನ್ ಫ್ರಾನ್ಸಿಸ್ಕೊದ ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವ ಅಮೆರಿಕಾ ಲಂಗ್ ಅಸೋಸಿಯೇಶನ್, ವಯಸ್ಕ ನಾಗರಿಕರಿಂದ ಸ್ಮಾರ್ಟ್ಫೋನ್ ಮೂಲಕ ರಿಯಲ್ ಟೈಂ ಮಾಹಿತಿ ಸಂಗ್ರಹಿಸುವ ವ್ಯವಸ್ಥೆ ಮಾಡಿಕೊಂಡಿದೆ.
18 ವರ್ಷ ಅಥವಾ ಅದಕ್ಕೂ ಮೇಲ್ಪಟ್ಟ ನಾಗರಿಕರು ಸಿಟಿಜೆನ್ ಸೈಂಟಿಸ್ಟ್ಗಳಾಗಲು (ನಾಗರಿಕ ವಿಜ್ಞಾನಿ) ಅವಕಾಶ ನೀಡಲಾಗಿದೆ. ಕೋವಿಡ್ ಸಂಬಂಧಿತ ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ಕೋವಿಡ್ ಸಂಶೋಧನೆಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಈ ಕೋವಿಡ್ ಸಿಟಿಜೆನ್ ಸೈನ್ಸ್ (COVID-19 Citizen Science- CCS) ಯೋಜನೆಯನ್ನು ರೂಪಿಸಲಾಗಿದೆ. ಸ್ಮಾರ್ಟ್ಫೋನ್ನಲ್ಲಿ ಈ ಕುರಿತ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಯಾರಾದರೂ ಸಿಟಿಜೆನ್ ಸೈಂಟಿಸ್ಟ್ಗಳಾಗಬಹುದು.
ಕೋವಿಡ್-19 ಕಾಯಿಲೆಗೆ ಕಾರಣವಾಗುವ ಕೊರೊನಾ ವೈರಸ್ ಹರಡುವಿಕೆ ವ್ಯಕ್ತಿಯಿಂದ ವ್ಯಕ್ತಿಗೆ ಹಾಗೂ ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನವಾಗಿದೆ. ಜನತೆ ಹಾಗೂ ಸಮುದಾಯದಲ್ಲಿ ಈ ವೈರಸ್ ಯಾವ ರೀತಿ ಹರಡುತ್ತದೆ ಎಂಬ ಬಗ್ಗೆಯೂ ಇನ್ನೂ ಸಾಕಷ್ಟು ತಿಳಿಯಬೇಕಿದೆ.
ಸಿಸಿಎಸ್ ಪ್ಲಾಟ್ಫಾರ್ಮನಲ್ಲಿರುವ ನಾಗರಿಕರು ಆ್ಯಪ್ ಮೂಲಕ ಹಂಚಿಕೊಳ್ಳುವ ಮಾಹಿತಿಯು ವಿಜ್ಞಾನಿಗಳಿಗೆ ಸಾಕಷ್ಟು ಸಹಾಯಕವಾಗಲಿದೆ ಎನ್ನಲಾಗಿದೆ. ನಾಗರಿಕರು ನೀಡುವ ಮಾಹಿತಿಯಿಂದ ಕೊರೊನಾ ವೈರಸ್ ಹರಡುವಿಕೆ ಹಾಗೂ ಅದನ್ನು ನಿಯಂತ್ರಿಸುವ ಕ್ರಮಗಳನ್ನು ಮತ್ತಷ್ಟು ಉತ್ತಮವಾಗಿ ತಿಳಿಯಬಹುದಾಗಿದೆ.
ಅಂಕಿ ಸಂಖ್ಯೆಗಳ ಸಾಮರ್ಥ್ಯದಿಂದ ಕೊರೊನಾ ವೈರಸ್ ಸಂಶೋಧನೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಸಾಧ್ಯವಾಗಲಿದೆ ಎಂದು ಅಮೆರಿಕನ್ ಲಂಗ್ ಅಸೋಸಿಯೇಶನ್ ಅಧ್ಯಕ್ಷ ಮತ್ತು ಸಿಇಓ ಹ್ಯಾರೋಲ್ಡ್ ವಿಮ್ಮರ್ ಹೇಳಿದ್ದಾರೆ.
"ನಮ್ಮ ಸಂಸ್ಥೆಯು ಸಮಯೋಚಿತ ಹಾಗೂ ನಿರ್ದಿಷ್ಟ ಗುರಿಗಳೊಂದಿಗೆ ಕೆಲಸ ಮಾಡುತ್ತಿದೆ. ಹೆಚ್ಚೆಚ್ಚು ನಾಗರಿಕರನ್ನು ನಮ್ಮ ಯೋಜನೆಯಲ್ಲಿ ಸೇರಿಸಿಕೊಂಡು ಹೆಚ್ಚು ಅಂಕಿ ಸಂಖ್ಯೆಗಳನ್ನು ಸಂಗ್ರಹಿಸುವ ಮೂಲಕ ಕೋವಿಡ್-19 ನಿಯಂತ್ರಣ ಕ್ರಮಗಳ ಸಂಶೋಧನೆಗಳನ್ನು ಕೈಗೊಳ್ಳುವುದು ಯೋಜನೆಯ ಉದ್ದೇಶವಾಗಿದೆ." ಎಂದು ವಿಮ್ಮರ್ ತಿಳಿಸಿದರು.
ಕೋವಿಡ್-19 ವೈರಸ್ ತಡೆಗಟ್ಟಲು ಸಂಶೋಧನೆಗಳಿಗಾಗಿ 25 ಮಿಲಿಯನ್ ಡಾಲರ್ ಮೊತ್ತವನ್ನು ಅಮೆರಿಕದ ಲಂಗ್ ಅಸೋಸಿಯೇಶನ್ ಈಗಾಗಲೇ ಮೀಸಲಿಟ್ಟಿದೆ.